ಮಂಗಳೂರು: ಬೆಂಗಳೂರು ಮಹಾನಗರವನ್ನು ಕರಾವಳಿ ಭಾಗಗಳೊಂದಿಗೆ ಸಂಪರ್ಕಿಸುವ ಮೂರು ಪ್ರಮುಖ ಘಾಟಿ ರಸ್ತೆಗಳಾದ ಚಾರ್ಮಾಡಿ, ಶಿರಾಡಿ ಮತ್ತು ಸಂಪಾಜೆ ಘಾಟಿಗಳು ಸಂಪೂರ್ಣ ಬಂದ್ ಆಗಿವೆ. ಇದರಿಂದಾಗಿ ಬೆಂಗಳೂರಿನಿಂದ ಮಂಗಳೂರು, ಉಡುಪಿ ಮತ್ತು ಕರಾವಳಿಯ ಇನ್ನಿತರ ಕಡೆಗೆ ಇಂದು ಹೊರಡಬೇಕಾಗಿದ್ದ ಎಲ್ಲಾ ಬಸ್ ಸೇವೆಗಳು ರದ್ದುಗೊಂಡಿವೆ.
ಘಾಟಿ ರಸ್ತೆ ಭಾಗದಲ್ಲಿ ಅತಂತ್ರ ಸ್ಥಿತಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ರಾತ್ರಿ 10.30ರ ಬಳಿಕ ಕೆ.ಎಸ್.ಆರ್.ಟಿ.ಸಿ ಸಹಿತ ಎಲ್ಲಾ ಖಾಸಗಿ ಟ್ರಾವೆಲ್ಸ್ ಗಳು ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿವೆ. ಇದರಿಂದಾಗಿ ಬೆಂಗಳೂರಿನಿಂದ ಕರಾವಳಿ ಕಡೆಗೆ ಹೊರಟಿದ್ದ ನೂರಾರು ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಉಡುಪಿ ಸಿದ್ಧಾಪುರ ಮೂಲಕ ಸಾಗುವ ಬಾಳೆಬರೆ ಘಾಟಿ ಸಂಚಾರಕ್ಕೆ ಮುಕ್ತವಾಗಿದ್ದು ಕರಾವಳಿಯಿಂದ ಬೆಂಗಳೂರು ಮತ್ತು ಘಟ್ಟ ಪ್ರದೇಶಗಳಿಗೆ ಹೋಗುವವರಿಗೆ ಈ ರಸ್ತೆಯ ಮೂಲಕ ಸಾಗಬಹುದಾಗಿದೆ. ಇತ್ತ ಮಣಿಪಾಲ, ಉಡುಪಿ ಭಾಗಗಳಿಂದ ಶಿರಾಡಿ ಮಾರ್ಗದ ಮೂಲಕ ಹೋಗಬೇಕಾಗಿದ್ದ KSRTC ಬಸ್ಸುಗಳೆಲ್ಲಾ ಮಂಗಳೂರಿನವರೆಗೆ ತೆರಳಿ ವಾಪಾಸಾಗಿವೆ.
ಬೆಂಗಳೂರಿನಿಂದ ಮಂಗಳೂರು ಕಡೆ ಬರಬೇಕಾಗಿದ್ದ ಹಾಗೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗಬೇಕಾಗಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಶುಕ್ರವಾರ ರಾತ್ರಿ 10 ಗಂಟೆಗಳವರೆಗೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿವೆ. ಆದರೆ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಬೀಳುತ್ತಿರುವ ಕಾರಣ ಯಾವುದೇ ಸಂದರ್ಭದಲ್ಲೂ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗಬೇಕಾಗಿದ್ದ ಕೆ.ಎಸ್.ಆರ್.ಟಿ.ಸಿ.ಯ ರಾಜಹಂಸ ಮತ್ತು ಸುವರ್ಣ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಸೀಮಿತ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಗಳವರೆಗೆ ಬಿಡಲಾಗಿದೆ. ಮತ್ತು ಪುತ್ತೂರು ಡಿಪೋದಿಂದ ನಾಲ್ಕು ಬಸ್ಸುಗಳನ್ನು ಬದಲೀ ಮಾರ್ಗದಲ್ಲಿ ಬೆಂಗಳೂರು ಮತ್ತು ಮೈಸೂರು ಕಡೆಗೆ ಬಿಡಲಾಗಿದೆ ಎಂಬ ಮಾಹಿತಿಯನ್ನು ಮಂಗಳೂರು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್ ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.