Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಲೀ ಚಾಂಗ್‌ ವೀ ಚಾಂಪಿಯನ್‌

12:17 PM Mar 14, 2017 | Team Udayavani |

ಬರ್ಮಿಂಗಂ: ಮಲೇಶ್ಯದ 34ರ ಹರೆಯದ ಲೀ ಚಾಂಗ್‌ ವೀ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌’ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ರವಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅಗ್ರ ಶ್ರೇಯಾಂಕದ ಚಾಂಗ್‌ ವೀ 21-12, 21-10 ಅಂತರದಿಂದ ಚೀನದ ಶೀ ಯುಕಿ ಅವರನ್ನು ಪರಾಭವಗೊಳಿಸಿದರು.

Advertisement

ಇದು ವಿಶ್ವದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರನಾಗಿರುವ ಲೀ ಚಾಂಗ್‌ ವೀಗೆ ಒಲಿದ 4ನೇ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಓಪನ್‌’ ಕಿರೀಟ. ಅವರು ವಿಶ್ವದ ಈ ಪುರಾತನ ಹಾಗೂ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ 13ನೇ ಸಲ ಕಾಣಿಸಿ ಕೊಂಡಿದ್ದರು, ಜತೆಗೆ ಇದೇ ತನ್ನ ಕೊನೆಯ ಆಲ್‌ ಇಂಗ್ಲೆಂಡ್‌ ಪಂದ್ಯಾವಳಿ ಎಂದು ತೀರ್ಮಾನಿಸಿದ್ದರು. ಆದರೆ ಗೆಲುವಿನ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

“ಪ್ರತಿ ಸಲವೂ ನಾನಿಲ್ಲಿ ಆಡಲು ಬಂದಾಗ ನನಗೆ ಮನೆಯ ವಾತಾ ವರಣವೇ ಕಂಡುಬರುತ್ತದೆ. ಮನೆ ಯಂಗಳ ದಲ್ಲಿ ಆಡಿದ ಅನುಭವವಾಗು ತ್ತದೆ. ಹೀಗಾಗಿ ಮುಂದಿನ ವರ್ಷ ಖಂಡಿತ ವಾಗಿಯೂ ಇಲ್ಲಿಗೆ ಆಗಮಿಸುತ್ತೇನೆ…’ ಎಂದು ಲೀ ಚಾಂಗ್‌ ವೀ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಅಭ್ಯಾಸ ನಡೆಸು ತ್ತಿದ್ದಾಗ ಬಿದ್ದು ಕಾಲಿಗೆ ಏಟು ಮಾಡಿ ಕೊಂಡಿದ್ದ ಚಾಂಗ್‌ ವೀ ಈ ಕೂಟದಲ್ಲಿ ಪಾಲ್ಗೊಂಡಿದ್ದೇ ಒಂದು ಅಚ್ಚರಿ. ಪಂದ್ಯಾ ವಳಿಗೆ 9 ದಿನಗಳಿರುವ ತನಕವೂ ಅವರು ಇದರಲ್ಲಿ ಭಾಗವಹಿಸುವುದು ಖಾತ್ರಿ ಇರಲಿಲ್ಲ. ಈಗಲೂ ಅವರು ಪೂರ್ತಿ ಚೇತರಿಸಿಕೊಂಡಿಲ್ಲ. ಆದರೂ ಈ ಕೂಟ ದಲ್ಲಿ ಚಾಂಗ್‌ ವೀ ಆಟ ಅಮೋಘ ವಾಗಿತ್ತು. ಚಾಂಪಿಯನ್‌ ಹಾದಿಯಲ್ಲಿ ಅವರು ಕಳೆದುಕೊಂಡದ್ದು ಕೇವಲ ಒಂದು ಗೇಮ್‌ ಮಾತ್ರ.

ಇನ್ನೊಂದೆಡೆ 21ರ ಹರೆಯದ, ಶ್ರೇಯಾಂಕ ರಹಿತ ಶೀ ಯುಕಿ ಅವರಿಲ್ಲಿ ಕಳೆದುಕೊಳ್ಳುವಂಥದ್ದೇನೂ ಇರಲಿಲ್ಲ. ಅವರಿಗೆ ಇದು ಮೊದಲ ಫೈನಲ್‌ ಪ್ರವೇಶ. ಸೆಮಿಫೈನಲ್‌ನಲ್ಲಿ ಅವರು ಚೀನ ದವರೇ ಆದ, ಹಾಲಿ ಚಾಂಪಿಯನ್‌ ಖ್ಯಾತಿಯ ಲಿನ್‌ ಡಾನ್‌ಗೆ ಆಘಾತಕಾರಿ ಸೋಲುಣಿಸಿದ್ದರು. ಇದು ಶೀ ಯುಕಿ ಪಾಲಿಗೆ ಮಹಾನ್‌ ಸಾಧನೆಯಾಗಿತ್ತು. ಆದರೆ ಫೈನಲ್‌ನಲ್ಲಿ ಅವರು ಇದೇ ಆಟವನ್ನು ಪುನರಾವರ್ತಿಸುವಲ್ಲಿ ವಿಫ‌ಲ ರಾದರು. ಹೀಗಾಗಿ ಪ್ರಶಸ್ತಿ ಕಾಳಗ ಏಕಪಕ್ಷೀಯವಾಗಿ ಸಾಗಿತು. ಅಕಸ್ಮಾತ್‌ ಲಿನ್‌ ಡಾನ್‌ ಫೈನಲ್‌ ಪ್ರವೇಶಿಸಿದ್ದರೆ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುತ್ತಿದ್ದ ಸಾಧ್ಯತೆ ಇತ್ತು.

Advertisement

ಇದಕ್ಕೂ ಮುನ್ನ 2010, 2011 ಹಾಗೂ 2014ರಲ್ಲಿ ಚಾಂಪಿಯನ್‌ ಆಗಿದ್ದ ಲೀ ಚಾಂಗ್‌ ವೀ, ಮಲೇಶ್ಯದ ವೊಂಗ್‌ ಪೆಂಗ್‌ ಸೂನ್‌ ಮತ್ತು ಎಡ್ಡಿ ಚೂಂಗ್‌ ಅವರ ದಾಖಲೆಯನ್ನು ಸರಿ ದೂಗಿಸಿದರು. ಇವರು ತಮ್ಮ 4 ಆಲ್‌ ಇಂಗ್ಲೆಂಡ್‌ ಪ್ರಶಸ್ತಿಗಳನ್ನು 50ರ ದಶಕದಲ್ಲಿ ಜಯಿಸಿದ್ದರು. ಆಗಿನ್ನೂ ಈ ಪಂದ್ಯಾವಳಿಗೆ ಅಧಿಕೃತ ವರ್ಲ್ಡ್ ಚಾಂಪಿಯನ್‌ಶಿಪ್‌ ಮುದ್ರೆ ಬಿದ್ದಿರಲಿಲ್ಲ. ಚಾಂಗ್‌ ವೀ ಇಲ್ಲಿ ಚಾಂಪಿಯನ್‌ ಆದ ಅತೀ ಹಿರಿಯ ಆಟಗಾರನಾಗಿದ್ದಾರೆ.

“ನಾನು ಲೀ ಚಾಂಗ್‌ ವೀ ಅವರಿಂದ ಸಾಕಷ್ಟು ಕಲಿತೆ. ಅವರು ಕೌಶಲ, ತಂತ್ರ ಗಾರಿಕೆ ಸಹಿತ ಆಟದ ಎಲ್ಲ ವಿಭಾಗಗಳಲ್ಲೂ ನನಗಿಂತ ಎಷ್ಟೋ ಮುಂದಿದ್ದರು. ಪ್ರಶಸ್ತಿಗೆ ಅವರು ಅರ್ಹರಾಗಿದ್ದರು…’ ಎಂಬುದು ಶೀ ಯುಕಿ ಅವರ ಪ್ರತಿಕ್ರಿಯೆ.

ತೈ ಜು ಯಿಂಗ್‌ ವನಿತಾ ಚಾಂಪಿಯನ್‌
ತೈವಾನಿನ ಇಬ್ಬರು ಆಟಗಾರ್ತಿಯರ ನಡುವೆ ಸಾಗಿದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಗೆಲುವಿನ ಅದೃಷ್ಟ 23ರ ಹರೆಯದ, ಅಗ್ರ ಶ್ರೇಯಾಂಕಿತ ಆಟಗಾರ್ತಿ ತೈ ಜು ಯಿಂಗ್‌ ಅವರ ಕೈ ಹಿಡಿಯಿತು. ಫೈನಲ್‌ನಲ್ಲಿ ಅವರು ರಚನೋಕ್‌ ಇಂತಾನನ್‌ ವಿರುದ್ಧ 21-16, 22-20 ಅಂತರದ ಗೆಲುವು ಒಲಿಸಿಕೊಂಡರು. ಇದು ತೈ ಜು ಯಿಂಗ್‌ ಹಾಗೂ ತೈವಾನ್‌ ಪಾಲಾದ ಮೊದಲ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಎಂಬುದು ಉಲ್ಲೇಖನೀಯ.

ಲೀ ಚಾಂಗ್‌ ವೀ ಮತ್ತು ತೈ ಜು ಯಿಂಗ್‌ ಅವರ ಜಯಭೇರಿಯೊಂದಿಗೆ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚೀನದ ಪ್ರಭುತ್ವಕ್ಕೆ ಮೊದಲ ಸಲ ದೊಡ್ಡ ಹೊಡೆತ ಬಿದ್ದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next