ಗಂಗೊಳ್ಳಿ: ಅಂಗನವಾಡಿ ಕೇಂದ್ರಗಳು ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಸದ್ಗುಣಗಳನ್ನು ಬೆಳೆಸುವ ಕೇಂದ್ರವಾಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂಗನವಾಡಿ ಕೇಂದ್ರಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಎಲ್ಲ ರೀತಿಯಲ್ಲಿಯೂ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಅವರು ಸೋಮವಾರ ಜಿ. ಪಂ. ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಕುಂದಾಪುರ ಹಾಗೂ ಗ್ರಾ. ಪಂ. ಗಂಗೊಳ್ಳಿ ಸಹಯೋಗದೊಂದಿಗೆ ಮೇಲ್‌ಗಂಗೊಳ್ಳಿಯ ಸರಕಾರಿ ಕಿ. ಪ್ರಾ. ಶಾಲಾ ವಠಾರದಲ್ಲಿ ನಿರ್ಮಿಸಲಾದ ಮೇಲ್‌ಗಂಗೊಳ್ಳಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 2 ಕೋ. ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಗಂಗೊಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರದ ಇನ್ನಷ್ಟು ಅನುದಾನವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು.
ಗಂಗೊಳ್ಳಿ ಗ್ರಾ. ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಜಿ. ಪಂ. ಸದಸ್ಯೆ ಶೋಭಾ ಜಿ.ಪುತ್ರನ್, ಕುಂದಾಪುರ ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ಸದಸ್ಯರಾದ ಸುರೇಂದ್ರ ಖಾರ್ವಿ, ನಾರಾಯಣ ಕೆ.ಗುಜ್ಜಾಡಿ, ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ಶಾಂತಿ ಖಾರ್ವಿ, ಸುಮಿತ್ರಾ ಶೇರುಗಾರ್, ಪಿಡಿಒ ಚಂದ್ರಶೇಖರ್, ಡಾ| ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ನಾಗೇಶ, ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ರಮೇಶ ಮಹಾಲೆ ಸ್ವಾಗತಿಸಿದರು. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ ನಿರ್ವಹಿಸಿದರು. ಫಿಲೋಮಿನಾ ಫೆರ್ನಾಂಡಿಸ್ ವಂದಿಸಿದರು.