Advertisement

ಪುಣೆಗೆ ಸಾಗಿದೆ “ವಿಸಲ್‌ ಪೋಡು ಎಕ್ಸ್‌ಪ್ರೆಸ್‌’ರೈಲು!

06:15 AM Apr 20, 2018 | |

ಪುಣೆ: 2018ರ ಐಪಿಎಲ್‌ನಲ್ಲಿ ಅತ್ಯಂತ ಖುಷಿಪಟ್ಟ ಹಾಗೂ ಅಷ್ಟೇ ಬೇಸರಗೊಂಡವರೆಂದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅಭಿಮಾನಿಗಳು. ಚೆನ್ನೈ ತಂಡ 2 ವರ್ಷಗಳ ನಿಷೇಧ ಮುಗಿಸಿ ಐಪಿಎಲ್‌ಗೆ ವಾಪಸ್ಸಾದ್ದರಿಂದ ಸಹಜವಾಗಿಯೇ ಚೆನ್ನೈ ಫ್ಯಾನ್ಸ್‌ ಸಂಭ್ರಮದಲ್ಲಿ ತೇಲಾಡತೊಡಗಿದರು.

Advertisement

ಆದರೆ ಚೆನ್ನೈಯಲ್ಲಿ ಒಂದು ಪಂದ್ಯ ಆಡುವಷ್ಟರಲ್ಲಿ ಐಪಿಎಲ್‌ಗೆ “ಕಾವೇರಿ ಬಿಸಿ’ ತಟ್ಟಿತು. ಪ್ರತಿಭಟನೆ ಜೋರಾಯಿತು. ಚೆನ್ನೈಯಲ್ಲಿ ನಡೆಯಬೇಕಿದ್ದ ಪಂದ್ಯಗಳೆಲ್ಲ ಪುಣೆಗೆ ಸ್ಥಳಾಂತರಗೊಂಡವು. ಅಭಿಮಾನಿಗಳು ಹತಾಶರಾದರು. ತಮ್ಮ ನೆಚ್ಚಿನ ಕ್ರಿಕೆಟ್‌ ತಾರೆಯರನ್ನು ಕಾಣುವ, ಅವರ ಆಟವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾದುದಕ್ಕೆ ಪರಿತಪಿಸಿದರು. ಒಂದರ್ಥದಲ್ಲಿ ಹೇಳುವುದಾದರೆ, ಇದು ಅವರಾಗಿಯೇ ಆಹ್ವಾನಿಸಿಕೊಂಡ ಅವಾಂತರ.

ಆದರೆ ಚೆನ್ನೈ ಫ್ರಾಂಚೈಸಿ ಸುಮ್ಮನುಳಿಯಲಿಲ್ಲ. ಚೆನ್ನೈ ಅಭಿಮಾನಿಗಳನ್ನು ಪುಣೆಗೆ ಕಳುಹಿಸಿ, ಅಲ್ಲಿ ಧೋನಿ ಪಡೆಯನ್ನು ಹುರಿದುಂಬಿಸಲು ವ್ಯವಸ್ಥೆಯೊಂದನ್ನು ರೂಪಿಸಲು ಮುಂದಾಯಿತು. ಇದರ ಫ‌ಲವೇ, “ವಿಸಲ್‌ಪೋಡು ಎಕ್ಸ್‌ಪ್ರೆಸ್‌ ರೈಲು’!

ಇದು ಚೆನ್ನೈ ಕ್ರಿಕೆಟ್‌ ಅಭಿಮಾನಿಗಳನ್ನು ಪುಣೆಗೆ ಕಳುಹಿಸಲು ಕಲ್ಪಿಸಲಾದ ವಿಶೇಷ ರೈಲು. ಇದರಲ್ಲಿ ಸಾವಿರ ಮಂದಿ ಕ್ರಿಕೆಟ್‌ ವೀಕ್ಷಕರಿದ್ದಾರೆ. ಇವರನ್ನು ಹೊತ್ತ ರೈಲು ಈಗಾಗಲೇ ಪುಣೆ ಹಾದಿ ಹಿಡಿದಿದೆ. ಅಲ್ಲಿ ಇವರಿಗೆ ಉಚಿತ ಆಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಚೆನ್ನೈ ತಂಡ ಶುಕ್ರವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಪುಣೆಯಲ್ಲಿ “ತವರಿನ ಪಂದ್ಯ’ ಆಡಲಿದೆ. ಇದು ತಟಸ್ಥ ತಾಣವಾದ್ದರಿಂದ ಈ ಮುಖಾಮುಖೀಯ ವೇಳೆ ಧೋನಿ ಪಡೆಯನ್ನು ಹುರಿದುಂಬಿಸುವುದು (ವಿಸಲ್‌ ಪೋಡು-ಶಿಳ್ಳೆ ಹಾಕು) ಈ ಅಭಿಮಾನಿಗಳ ಕೆಲಸ.

ಯಾರಿಗೆ ಒಲಿದೀತು ಪುಣೆ?
ಚೆನ್ನೈ ಸೂಪರ್‌ ಕಿಂಗ್ಸ್‌ ಈವರೆಗೆ 3 ಪಂದ್ಯಗಳನ್ನಾಡಿದ್ದು, ಎರಡರಲ್ಲಿ ಜಯ ಸಾಧಿಸಿದೆ. “ವಾಂಖೇಡೆ’ಯಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ಎದುರಿನ ಉದ್ಘಾಟನಾ ಪಂದ್ಯವನ್ನು ಒಂದು ವಿಕೆಟ್‌ ಅಂತರದಿಂದ ರೋಮಾಂಚಕಾರಿಯಾಗಿ ಗೆದ್ದ ಚೆನ್ನೈ, ಬಳಿಕ ಕೆಕೆಆರ್‌ ವಿರುದ್ಧ ತವರಿನಂಗಳದಲ್ಲಿ 5 ವಿಕೆಟ್‌ಗಳಿಂದ ಜಯಿಸಿತು. ಆದರೆ ಮೊಹಾಲಿಯಲ್ಲಿ ಪಂಜಾಬ್‌ಗ 4 ರನ್ನುಗಳಿಂದ ಶರಣಾಯಿತು.

Advertisement

ಇನ್ನೊಂದೆಡೆ ರಾಜಸ್ಥಾನ್‌ 4 ಪಂದ್ಯಳನ್ನಾಡಿದ್ದು, ಎರಡನ್ನು ಗೆದ್ದು ಉಳಿದೆರಡರಲ್ಲಿ ಸೋತಿದೆ. ಪುಣೆ ಯಾರಿಗೆ ಒಲಿಯುತ್ತದೆಂಬುದೊಂದು ಕುತೂಹಲ. ಈ ಬಾರಿ ಪುಣೆ ಫ್ರಾಂಚೈಸಿ ಇಲ್ಲವಾದ್ದರಿಂದ ಪುಣೆಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇದು ಬಯಸದೇ ಬಂದ ಭಾಗ್ಯವಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next