Advertisement

ರಾಜ್ಯದ ಎಲ್ಲ  259 ಯಾತ್ರಿಗಳೂ ಕ್ಷೇಮ

06:00 AM Jul 04, 2018 | Team Udayavani |

ಬೆಂಗಳೂರು /ಕಾಠ್ಮಂಡು: ಭಾರೀ ಮಳೆಯಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯಿಂದ ವಾಪಸಾಗುವಾಗ ನೇಪಾಲದ ಸಿಮಿಕೋಟ್‌ನಲ್ಲಿ 3-4 ದಿನಗಳಿಂದ ಸಿಲುಕಿಕೊಂಡಿದ್ದ ಕರ್ನಾಟಕ ಮೂಲದ 259 ಯಾತ್ರಿಗಳನ್ನು ಸುರಕ್ಷಿತ ತಾಣಗಳಿಗೆ ಕರೆತರಲಾಗುತ್ತಿದೆ ಎಂದು ಕರ್ನಾಟಕ ಸರಕಾರ ಹೇಳಿದೆ. 

Advertisement

ಭಾರತೀಯ ಯಾತ್ರಿಗಳು ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಬಂದ ಕೂಡಲೇ ಅವರ ರಕ್ಷಣೆಗಾಗಿ ಭಾರತೀಯ ರಾಯಭಾರಿ ಕಚೇರಿ ನೇಪಾಲ ಸರಕಾರದೊಂದಿಗೆ ಸಂಪರ್ಕ ಸಾಧಿಸಿ ರಕ್ಷಣಾ ಕಾರ್ಯಕ್ಕೆ ಸೂಚಿಸಿದೆ. ಅಲ್ಲದೇ ನೇಪಾಲದ ಗಂಜ್‌ ಮತ್ತು ಸಿಮಿಕೋಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಯಾತ್ರಾರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸಿ ಅಲ್ಲಿ ಆಹಾರ ಸಹಿತ ಅವಶ್ಯವಿರುವ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕರ್ನಾಟಕದ 259 ಯಾತ್ರಾರ್ಥಿಗಳ ಪೈಕಿ ರಾಮನಗರ, ಮಂಡ್ಯ, ಮೈಸೂರಿನವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ದಿಲ್ಲಿ ಕನ್ನಡ ಭವನದಲ್ಲಿ ಮೂವರು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸಂಪರ್ಕಕ್ಕೆ ಸಿಕ್ಕ ಯುವಕ: ಕಳೆದೆರಡು ದಿನಗಳಿಂದ ಮನೆಯವರ ಸಂಪರ್ಕಕ್ಕೆ ಸಿಗದಿದ್ದ ಯಾತ್ರೆ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಾಂಬೂದಿಯ ದರ್ಶನ್‌ ಎಂಬವರು ಇದೀಗ ಟಿಬೆಟ್‌ನಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದಿಂದ ಯಾತ್ರೆಗೆ ಹೋಗಿ ಸಂಕಷ್ಟಕ್ಕೆ ಸಿಲುಕಿ ದವರನ್ನು ವಾಪಸ್‌ ಕರೆತರುವ ಸಂಬಂಧ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಳ್ತಂಗಡಿಯ  30 ಮಂದಿ ಕ್ಷೇಮ
ಬೆಳ್ತಂಗಡಿ:
ಬೆಳ್ತಂಗಡಿಯಿಂದ ಅಮರನಾಥ ಯಾತ್ರೆಗೆ ಹೊರಟಿರುವ 30 ಜನರ ತಂಡ ಪ್ರಸ್ತುತ ಶ್ರೀನಗರ ದಾಟಿ ತೆರಳುತ್ತಿದ್ದು, ಯಾವುದೇ ತೊಂದರೆಯಿಲ್ಲದೆ ಯಾತ್ರೆ ಮುಂದುವರಿಸಿದೆ.

ಬೆಳ್ತಂಗಡಿಯಿಂದ ವೆಂಕಟೇಶ್‌ ಬೆಂಡೆ ಅವರು ಸ್ನೇಹಿತರ ಜತೆ ಸೇರಿ ಖಾಸಗಿಯಾಗಿ ರೈಲಿನ ಮೂಲಕ ಅಮರನಾಥ ಯಾತ್ರೆ ಕೈಗೊಂಡಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಜಮ್ಮು ಬಲ್ಕಾನ್‌ ಗೇಟ್‌ ದಾಟಿ ಹೋಗುತ್ತಿರುವ ಕುರಿತು ಬೆಂಡೆ ಅವರು ಮನೆಗೆ ಮಾಹಿತಿ ನೀಡಿದ್ದಾರೆ. ಸುಮಾರು 30 ಸ್ನೇಹಿತರು, ಅದರಲ್ಲೂ ಬಹುತೇಕ ಮಂದಿ ಸಂಬಂಧಿಕರು ಸೇರಿ ಜೂ. 29ರಂದು ಬೆಳ್ತಂಗಡಿಯಿಂದ ಯಾತ್ರೆ ಹೊರಟಿದ್ದರು. ಕಾರ್ಕಳ ತಾಲೂಕಿನ ಮೂವರೂ ತಂಡದಲ್ಲಿದ್ದಾರೆ.

Advertisement

ಅಧಿವೇಶನದಲ್ಲೂ  ಪ್ರಸ್ತಾವ
ಮಾನಸ ಸರೋವರ ಯಾತ್ರೆಗೆ ಹೋಗಿರುವವರು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರಸ್ತಾವವಾಯಿತು. ಸರಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ದೇಶಪಾಂಡೆ, ಬೆಳ್ತಂಗಡಿ, ಮೈಸೂರು, ಮಂಡ್ಯ ಸಹಿತ ನಮ್ಮ ಎಲ್ಲ ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದರು.

ಕನ್ನಡಿಗರೆಲ್ಲರೂ ಸುರಕ್ಷಿತ
ಘಟನೆ ಬಗ್ಗೆ ದಿಲ್ಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿದ್ದು, ಯಾತ್ರಾರ್ಥಿಗಳನ್ನು ರಕ್ಷಿಸುವ ಕೆಲಸ ನಡೆದಿದ್ದು, ಯಾರೂ ಆತಂಕ ಪಡುವ ಆವಶ್ಯಕತೆ ಇಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ನೇರವಾಗಿ ಮಾತನಾಡಿದ್ದೇನೆ. ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದು, ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಾಯವಾಣಿ
 ಮಾಹಿತಿಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಾಯವಾಣಿ ಸಂಖ್ಯೆ  1070 ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next