Advertisement

ಅಳಿಕೆ: ಸಾಯಿ ಗಂಗಾ ಯೋಜನೆ- ಶ್ರಮಸೇವೆ, ವನಮಹೋತ್ಸವ, ಇಂಗುಗುಂಡಿಗಳ ನಿರ್ಮಾಣ

01:29 PM Aug 02, 2019 | keerthan |

ವಿಟ್ಲ; ಪೆನ್ನು ಹಿಡಿಯುವ ಕೈಗಳು ಹಾರೆ, ಪಿಕ್ಕಾಸು ಹಿಡಿದು ಗುಡ್ಡೆಗೆ ತೆರಳಿ, ಅಗೆದು, ಗುಂಡಿ ಮಾಡಿದರು. ಒಂದೆರಡಲ್ಲ. ನೂರಾರು ಇಂಗುಗುಂಡಿಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡಿಮೆಯೆಂದರೂ ಎರಡು ಇಂಗುಗುಂಡಿಗಳನ್ನು ನಿರ್ಮಿಸಿದರು. ಈ ಯೋಜನೆಯು ಹಬ್ಬದಂತೆ ರೂಪಿತಗೊಂಡಿತ್ತು.

Advertisement

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಅಳಿಕೆ ಗ್ರಾಮದ ಮಡಿಯಾಲದಲ್ಲಿರುವ ಗುಡ್ಡದಲ್ಲಿ, ಈ ವೈಭವ ನಡೆಯಿತು. ಸಾಯಿ ಗಂಗಾ ಯೋಜನೆ – 2009ರ ವಾರ್ಷಿಕ ಶ್ರಮಸೇವೆ ಯೋಜನೆಯಡಿಯಲ್ಲಿ ಜಲಸಂವರ್ಧನೆ, ವನಮಹೋತ್ಸವ, ಇಂಗುಗುಂಡಿಗಳ ನಿರ್ಮಾಣದ ಬೃಹತ್ ಯೋಜನೆಯನ್ನು ಅತಿಥಿಗಳು, ಆಡಳಿತ ಮಂಡಳಿ ಮತ್ತು ಬೋಧಕ, ಬೋಧಕೇತರ ವೃಂದದವರ ಮಾರ್ಗದರ್ಶನದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ಸಮಾರಂಭ ಉದ್ಘಾಟನೆ : ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ವೈ ಶಿವರಾಮಯ್ಯ ಅವರು ಉದ್ಘಾಟಿಸಿ, ಮಾತನಾಡಿ, ಜಲ ಮರುಪೂರಣ ಕಾರ್ಯ ಪ್ರಸಕ್ತ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ನೀಡುತ್ತಿರುವುದು ಸಂದರ್ಭೋಚಿತವಾಗಿದೆ. ಮಾನವನ ಅತೀ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಯಸ್ಕರ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸುಧಾಕರ ಕೆ. ಮಾತನಾಡಿ ಒಂದು ಶಾಲೆಯ ಮೂಲಕ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಮೂಲಕ ಮನೆ ಹಾಗೂ ಸಮಾಜಕ್ಕೆ ದೂರದೃಷ್ಟಿ ಚಿಂತನೆಗಳನ್ನು ತಲುಪಿಸುವ ಶಿಕ್ಷಣ ಸಂಸ್ಥೆಯ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಸಂಸ್ಥೆಯಲ್ಲಿ ಎರೆಹುಳ ಗೊಬ್ಬರ ತೊಟ್ಟಿ ನಿರ್ಮಾಣ ಮಾಡಲಾಗಿದೆ ಎಂದರು.

Advertisement

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು.ಗಂಗಾಧರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಕೆ.ಎಸ್. ಕೃಷ್ಣ ಭಟ್ ಅವರು ಶಾಲಾ ವಠಾರದಲ್ಲಿ ಎರಹುಳ ಗೊಬ್ಬರ ತೊಟ್ಟಿಯನ್ನು ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಘು ಟಿ.ವೈ. ಸ್ವಾಗತಿಸಿ, ಪ್ರಸ್ತಾವಿಸಿದರು. ಸಹ ಶಿಕ್ಷಕ ಗುರುಪ್ರಸಾದ್ ಬಡೆಕಿಲ್ಲಾಯ ವಂದಿಸಿದರು. ನಾರಾಯಣ ನಾಯಕ್ ನಿರೂಪಿಸಿದರು.

625 ಗಿಡಗಳನ್ನು ನೆಟ್ಟರು : ಜತೆಗೆ ಪುನರ್ಪುಳಿ, ಪೊನ್ನೆ, ಪಾಲಾಶ, ಎಣ್ಣೆಮರ, ಹೊಳೆದಾಸವಾಳ, ಬೀಟೆ, ಬಿಲ್ವಪತ್ರೆ, ಪೆಜ, ಬೊಳ್ಪಾದೆ ಸೇರಿ ಒಟ್ಟು 625 ವಿವಿಧ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟರು.

ತಂಡೋಪತಂಡ : ಶಿಕ್ಷಕರ ಮತ್ತು ಮಕ್ಕಳ ತಂಡವೆಂದು ರೂಪಿಸಲಾಗಿತ್ತು. ಬೆಳಗ್ಗೆ 6.30ರಿಂದ 9 ಗಂಟೆ ವರೆಗೆ ಒಂದು ತಂಡ, 9.30ರಿಂದ 12 ರವರೆಗೆ ಇನ್ನೊಂದು ತಂಡಗಳಂತೆ ಸಂಜೆ 6.30ರ ವರೆಗೆ ನಾಲ್ಕು ತಂಡಗಳಾಗಿ ಈ ಕಾರ್ಯ ನೆರವೇರಿಸಲಾಗಿತ್ತು. ಒಂದು ತಂಡದಲ್ಲಿ 90ರಿಂದ 110 ಮಕ್ಕಳು ಭಾಗಿಯಾಗಿದ್ದರು. ಅಂದರೆ ಒಟ್ಟು 400ಕ್ಕೂ ಅಧಿಕ ಮಕ್ಕಳು ಕಾರ್ಯನಿರ್ವಹಿಸಿದ್ದಾರೆ. ಕನಿಷ್ಠ ಎರಡು ಗುಂಡಿಗಳಂತೆ ತೋಡಿದರೂ 800 ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ವಾರ್ಡನ್ ಉದನೇಶ್ವರ ಭಟ್, ಹಿರಿಯ ಅಧ್ಯಾಪಕ ಮಧುಸೂದನ ಭಟ್, ರತ್ನಾಕರ ರೈ, ಪುಂಡರೀಕ ರಾವ್ ಮತ್ತು ಗ್ರಾ.ಪಂ.ಸದಸ್ಯರು ಸಹಕರಿಸಿದರು.


ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಶಾಲೆಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಶಾಲೆಯೆಂದು ಪುರಸ್ಕರಿಸಿದೆ. 2003ರಿಂದ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪಂಚಾಯತ್, ವಿದ್ಯಾರ್ಥಿಗಳ ಪಾಲಕರು ಇದಕ್ಕೆ ಸಹಕರಿಸುತ್ತಿದ್ದಾರೆ. ವಿದ್ಯಾರ್ಥಿಗಳು ರಾಯಭಾರಿಗಳು. ನಮ್ಮ ಶಾಲೆಯಲ್ಲಿ 3000 ಗಿಡಗಳು, ಆರ್ಕಿಡ್ ಗಿಡಗಳನ್ನು ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳು ನೋಡಿಕೊಳ್ಳುತ್ತಾರೆ. 2015-16ರಿಂದ ಶ್ರಮಸೇವಾ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಒಂದು ದಿನದ ಹಬ್ಬ ಇದಾಗಿದ್ದರೂ ಪ್ರತೀ ವರ್ಷವೂ ಈ ಯೋಜನೆ ಇತರರಿಗೆ ಪ್ರೇರಣೆಯಾಗಿದೆ. ಇದನ್ನು ಗಮನಿಸಿದ ಊರವರು ಕೂಡಾ ಇಂತಹ ಇಂಗುಗುಂಡಿಗಳನ್ನು ನಿರ್ಮಿಸುತ್ತಾರೆ. ಗ್ರಾಮ ಆದರ್ಶ ಗ್ರಾಮವಾಗಬೇಕು.
ರಘು ಟಿ.ವೈ. ಮುಖ್ಯ ಶಿಕ್ಷಕರು, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next