Advertisement

ಮೂಲಸೌಕರ್ಯಗಳ ಜೋಡಣೆ ತುರ್ತು ಅಗತ್ಯ

11:13 PM Feb 04, 2020 | mahesh |

ಕಾಪು: ಉಡುಪಿ ಜಿಲ್ಲೆಯ ಪ್ರಮುಖ ಕೇಂದ್ರವಾಗಿ, ರಾ.ಹೆ. 66ರಲ್ಲಿರುವ ಕಾಪು ಈಗ ತಾಲೂಕಾಗಿದ್ದು, ಅತ್ಯಂತ ವೇಗವಾಗಿ ನಗರ ಅಭಿವೃದ್ಧಿಯ ಹೊಸ ಶಕೆಗೆ ತೆರೆದುಕೊಳ್ಳುತ್ತಿದೆ. ನಗರ ವಿಸ್ತರೀಕರಣದೊಂದಿಗೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೂ ಇಲ್ಲಿನ ತುರ್ತು ಅಗತ್ಯ.

Advertisement

ವ್ಯಾವಹಾರಿಕ ಪ್ರದೇಶ
ರಕ್ಷಣಾಪುರ ಎಂಬ ಉಪನಾಮವನ್ನು ಹೊಂದಿರುವ ಕಾಪು ಸ್ವಾತಂತ್ರ್ಯ ಪೂರ್ವದಿಂದಲೇ ವ್ಯವಹಾರ ನಡೆಯುತ್ತಿದ್ದ ಪ್ರದೇಶವಾಗಿತ್ತು. ಅಂದು ಕಾಪು ಬೀಚ್‌ ಬಂದರು ಪ್ರದೇಶವಾಗಿ ಸರಕು ಸಾಗಾಟ ಕೇಂದ್ರವಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ಉಡುಪಿ-ಮಲ್ಪೆ ಬೆಳವಣಿಗೆ ಕಂಡಿದ್ದು, ಕಾಪು ಅಷ್ಟೊಂದು ಬೆಳವಣಿಗೆ ಕಂಡಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಜನಸಂಖ್ಯೆ, ಪ್ರದೇಶವಾರು, ರಾ.ಹೆ. ಅಭಿವೃದ್ಧಿಯಾದಂತೆ ಕಾಪು ಮತ್ತೆ ಮುನ್ನೆಲೆಗೆ ಬಂದಿದೆ. 2016ರಲ್ಲಿ ಕಾಪು, ಉಳಿಯಾರಗೊಳಿ ಮತ್ತು ಮಲ್ಲಾರು ಗ್ರಾಮ ಪಂಚಾಯತ್‌ಗಳನ್ನು ಸೇರಿಕೊಂಡು ಕಾಪು ಪುರಸಭೆಯಾಗಿದ್ದು, 2018ರಲ್ಲಿ ತಾಲೂಕು ಆದ ಬಳಿಕ ಅಭಿವೃದ್ಧಿಗೂ ಆಸ್ಪದ ದೊರಕಿದೆ.

ಕಾಪು ಪುರಸಭೆಯ ವಿಸ್ತೀರ್ಣ
ಸುಮಾರು 23.44 ಚದರ ಕಿ. ಮೀ. ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಕಾಪು ಪುರಸಭೆ ವ್ಯಾಪ್ತಿಯ ಒಟ್ಟು ಜನಸಂಖ್ಯೆ 2011ರ ಜನಗಣತಿಯ ಆಧಾರದಲ್ಲಿ 21,887 ಆಗಿತ್ತು. ಇಲ್ಲಿ ವಾಣಿಜ್ಯ (1,020) ಮತ್ತು ವಸತಿ (7,103) ಸೇರಿ 8,123 ಕಟ್ಟಡಗಳಿವೆ. ಪುರಸಭೆಯ ವಾರ್ಷಿಕ ಆದಾಯ 1.50 ಕೋಟಿ ರೂ. ಆಗಿದೆ. ಕಾಪು ಪೇಟೆಯಲ್ಲಿ ದಿನವೊಂದಕ್ಕೆ 2.50 ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತದೆ.

ನಡೆದಿರುವ ಅಭಿವೃದ್ಧಿ ಕೆಲಸಗಳು
ಪೊಲಿಪು ಸರಕಾರಿ ಆಸ್ಪತ್ರೆಯಿಂದ ಪೇಟೆಯ ಸರ್ಕಲ್‌ನ ವರೆಗೆ ಎರಡೂ ಬದಿಗೆ ಇಂಟರ್‌ಲಾಕ್‌ ಅಳವಡಿಕೆ, ಒಳಚರಂಡಿ ಯೋಜನೆಗೆ ಪೈಪ್‌ಲೈನ್‌ ಅಳವಡಿಕೆ, ಪೇಟೆಯ ಒಳಗಡೆ ಮಳೆ ನೀರು ಹರಿಯುವ ಚರಂಡಿ ರಚನೆ, ಸರ್ಕಲ್‌ನಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ, ಹಳೆ ಮಾರಿಗುಡಿ ರಸ್ತೆ ಬಳಿ ಫುಟ್‌ ಪಾತ್‌ ರಚನೆ, ಲಕ್ಷ್ಮೀ ಜನಾರ್ದನ ಹೊಟೇಲ್‌ನ ಬಳಿಯಿಂದ ವಿದ್ಯಾನಿಕೇತನ ಶಾಲಾ ಜಂಕ್ಷನ್‌ವರೆಗೆ ಚರಂಡಿ ನಿರ್ಮಾಣ ಸಹಿತ ರಸ್ತೆ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಮೊದಲಾದ ಕಾಮಗಾರಿಗಳು ಕಾಪು ಪೇಟೆಯಲ್ಲಿ ಪ್ರಗತಿಯಲ್ಲಿವೆ.

ಅಭಿವೃದ್ಧಿ ಸಮಿತಿ ಯೋಜನೆಗಳು
ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳೇ ಕಾಪುವಿನ ಅಭಿವೃದ್ಧಿಯ ಮೂಲ ಕೇಂದ್ರಗಳಾಗಿವೆ.
ಕಾಪು ಪೇಟೆಯ ಅಭಿವೃದ್ಧಿಗೆ 1999-2000ನೇ ಇಸವಿಯಲ್ಲಿ ಕಾಪುವಿನಲ್ಲಿ ಅಸ್ತಿತ್ವಕ್ಕೆ ಬಂದ ಕಾಪು ಅಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ. ಇದು ಕೆಲವೊಂದು ಯೋಜನೆಗಳನ್ನು ರೂಪಿಸಿದೆ.

Advertisement

ಪ್ರಮುಖ ಯೋಜನೆಗಳು
– ಪೊಲಿಪು ಜಂಕ್ಷನ್‌ ನಿಂದ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿವರೆಗೆ 6 ಪಾಯಿಂಟ್‌ಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ
– ಟಾಯ್ಲೆಟ್‌ ಅಳವಡಿಕೆ, ಪಾರ್ಕ್‌ ನಿರ್ಮಾಣ, ಬಸ್‌ ನಿಲ್ದಾಣಗಳ ನಿರ್ಮಾಣ
– ಸ್ವಾಗತ ಗೋಪುರ ನಿರ್ಮಾಣ
– ಘನ ತ್ಯಾಜ್ಯ ನಿರ್ವಹಣೆಗೆ ಯೋಜನೆ

ಆಗಬೇಕಾದ ಕೆಲಸಗಳೇನು?
ಹೆದ್ದಾರಿಯಿಂದ ಪೇಟೆಗೆ ಸಂಪರ್ಕ ಕಲ್ಪಿಸುವ ಸರ್ವೀಸ್‌ ರಸ್ತೆಗಳ ಅಭಿವೃದ್ಧಿ, ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ, ಪೇಟೆಯುದ್ದಕ್ಕೂ ಫುಟ್‌ಪಾತ್‌ ರಚನೆ, ಘನತ್ಯಾಜ್ಯ ನಿರ್ವಹಣೆಗೆ ಯೋಜನೆ, ಸರ್ಕಲ್‌ ಇನ್ಸ್‌ ಪೆಕ್ಟರ್‌ ಕಚೇರಿಯಿಂದ ವಿದ್ಯಾನಿಕೇತನ ಜಂಕ್ಷನ್‌ವರೆಗೆ ಮತ್ತು ವೈಶಾಲಿ ಹೊಟೇಲ್‌ನಿಂದ ಸರಕಾರಿ ಆಸ್ಪತ್ರೆಯವರೆಗೆ ಮಳೆ ನೀರು ಹರಿಯುವ ಚಂರಡಿ ರಚನೆ, ಸುಗಮ ಸಂಚಾರ ಮತ್ತು ಸುವ್ಯವಸ್ಥಿತ ಪಾರ್ಕಿಂಗ್‌ಗೆ ವ್ಯವಸ್ಥೆ, ಪೇಟೆಯೊಳಗೆ ಸಾರ್ವಜನಿಕ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಸಹಿತ ವಿವಿಧ ಮೂಲಸೌಕರ್ಯಗಳ ಜೋಡಣೆ ಅತೀ ಅಗತ್ಯವಾಗಿದೆ.

ಕಾಪು ಪೇಟೆಯ ಪ್ರಮುಖ ಅಂಶಗಳು
23.44
ಚದರ ಕಿ. ಮೀ. ವಿಸ್ತೀರ್ಣದ ಪ್ರದೇಶದಲ್ಲಿ ಕಾಪು ಪುರಸಭೆ ವ್ಯಾಪ್ತಿ ಹರಡಿಕೊಂಡಿದೆ.
2.50
ಕೋಟಿ ರೂ.ಗಳಷ್ಟು ವಹಿವಾಟು ದಿನವೊಂದಕ್ಕೆ ಕಾಪು ಪೇಟೆಯಲ್ಲಿ ನಡೆಯುತ್ತದೆ.
2018 ರಲ್ಲಿ ಕಾಪು ತಾಲೂಕು ಆಗಿ ಪರಿವರ್ತನೆ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next