Advertisement

ಸ್ಪರ್ಧೆಯ ಅನುಭವವೇ ಅನನ್ಯ

06:20 AM Apr 12, 2018 | Team Udayavani |

ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಅಲೆವೂರು ಯೋಗೀಶ್‌ ಆಚಾರ್ಯ ಸ್ವರ್ಣೋದ್ಯಮಿ. 2013ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಪರಾಜಿತಗೊಂಡಿದ್ದರು.

Advertisement

ಪಕ್ಷೇತರರಾಗಿ ಯಾಕೆ ಸ್ಪರ್ಧಿಸಿದಿರಿ?
         ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷನಾಗಿ 2012ರಲ್ಲಿ ಉಡುಪಿ ಕಲ್ಸಂಕದಲ್ಲಿ ವಿಶ್ವಕರ್ಮ ಸಮಾವೇಶ ಆಯೋಜಿಸಿ ಲಕ್ಷ ಜನರನ್ನು ಸೇರಿಸಿದ್ದೆ. ಆಗ ಡಿ.ವಿ. ಸದಾನಂದ ಗೌಡರು ಸಿಎಂ. ಡಾ| ವಿ.ಎಸ್‌. ಆಚಾರ್ಯ ಮಂತ್ರಿಗಳು. ಅಂದು ರಾಜಕೀಯ ಸ್ಥಾನಮಾನದ ಭರವಸೆ ಕೊಟ್ಟರು. 2013ರ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯವನ್ನು ಅವಗಣಿಸಿದರು. ಸಮುದಾಯದ ಅಭಿವೃದ್ಧಿ ಹಾಗೂ ಜನಸೇವೆಗಾಗಿ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದೆ.

ಸ್ಪರ್ಧೆಯಿಂದ ನಿಮಗೆ ಆದ ಲಾಭ?
        ಚುನಾವಣೆಯ ಖರ್ಚುಗಳನ್ನೆಲ್ಲ ನಾನೇ ಭರಿಸಿದ್ದೆ. ಆರ್ಥಿಕವಾಗಿ ನಷ್ಟವಾಗಿದೆ. ಆದರೆ ಬಡವರ ಮನೆಗಳಿಗೆ ಭೇಟಿ ಕೊಟ್ಟು ಅವರ ಕಷ್ಟಗಳನ್ನು ಅಭ್ಯರ್ಥಿಯಾಗಿ ಅರಿತುಕೊಂಡೆ. ಕೆಲ ಕಡೆಗಳಲ್ಲಿ ಜನರು, ಅಭ್ಯರ್ಥಿಯಾಗಿ ಬಂದವರು ನೀವೊಬ್ಬರೆ; ಇತರ ಪಕ್ಷಗಳ ಕಾರ್ಯಕರ್ತರು ಮಾತ್ರ ನಮ್ಮ ಮನೆಗೆ ಬಂದು ಓಟು ಕೇಳಿದ್ದರು ಎಂದಿದ್ದರು. ಜನರ ಮನಸ್ಸಿಗೆ ಮುಟ್ಟಿದ ಲಾಭ ನನಗೆ ಸಿಕ್ಕಿದೆ.

ಮತದಾನವೆಂದರೆ ಜನ ಏನು ಬಯಸುತ್ತಾರೆ?
       ರಸ್ತೆ, ಸೇತುವೆ ಮಾಡಿಬಿಟ್ಟರೆ ಅಭಿವೃದ್ಧಿ ಆಯಿತು ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಮನೆಗಳ ಪರಿಸ್ಥಿತಿ ಯಾರೂ ಅರಿಯುವುದಿಲ್ಲ. ಎಷ್ಟೋ ಮಂದಿಗೆ ಜಾಗ, ಮನೆಗಳೇ ಇಲ್ಲ. ಜಯ ಗಳಿಸೋದಿಲ್ಲವೆಂದು ಗೊತ್ತಿದ್ದರೂ ಮನೆಗಳ ಪರಿಸ್ಥಿತಿಯನ್ನರಿಯಲು ನಾನು 4,000 ಮನೆಗಳಿಗೆ ಭೇಟಿ ಕೊಟ್ಟು ಅವರ ಕಷ್ಟಗಳನ್ನು ಕೇಳಿದ್ದೇನೆ. ಇದು ನನಗೆ ಅನನ್ಯ ಅನುಭವ ಕೊಟ್ಟಿದೆ. ಮತ ಕೇಳಲು ಹೋದಾಗ ಕೆಲ ಬಡವರು ನಾವೇನಾದರೂ ಕೊಡುತ್ತೇವಾ ಅಂತ ಹಾತೊರೆಯುತ್ತಿದ್ದುದು ಕಂಡುಕೊಂಡೆ. ನಮ್ಮ ಮಕ್ಕಳಿಗೆ ಉದ್ಯೋಗವಿಲ್ಲ. ಕೊಡಿಸಿ ಎಂದು ಒಂದು ಮನೆಯವರೂ ಕೇಳಿಲ್ಲ. ಶೇ. 10ರಷ್ಟು ಜನ ಹಣವನ್ನೇ ನಿರೀಕ್ಷೆ ಮಾಡುವುದನ್ನು ನಾನು ಕಂಡೆ.

ನಿಮ್ಮ ನಿರೀಕ್ಷೆ ಏನಿತ್ತು?
     ಸಮುದಾಯಕ್ಕೆ ಸುಭದ್ರ ನೆಲೆಗಾಗಿ ಹೋರಾಟ ಮಾಡಿ ನಿರೀಕ್ಷೆಯಂತೆ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟೆವು. ಒತ್ತಾಯ ಮಾಡಿದರೂ ಬಿಜೆಪಿಗೆ ಕೇಳಲೇ ಇಲ್ಲ. ಕೊನೆಗೆ ಕಾಂಗ್ರೆಸ್‌ ವಿಶ್ವಕರ್ಮ ನಿಗಮ ಮಂಡಳಿ ಮಾಡಿತು. ಆದರೆ ಅನುದಾನ ಅಷ್ಟಕ್ಕಷ್ಟೆ. ಇನ್ನೂ ನಿರೀಕ್ಷೆ ಇಟ್ಟಿದ್ದೇವೆ. ಮುಂದಿನ ಸರಕಾರದ ಮುಂದೆ ಇಡುತ್ತೇವೆ.

Advertisement

ಈ ಬಾರಿ ಸ್ಪರ್ಧೆ ಮಾಡುವಿರಾ?
     ಹೌದು. ಕಾಪುವಿನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಬಯಸಿ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ. ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜತೆ ನೇರವಾಗಿ ಮಾತನಾಡಿದ್ದೇನೆ. ಟಿಕೆಟ್‌ ನೀಡುತ್ತೇವೆ ಎಂದಿದ್ದಾರೆ.

– ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next