Advertisement

ಆಂಧ್ರ-ತೆಲಂಗಾಣ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿ

06:53 PM Mar 26, 2021 | Team Udayavani |

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಏ.17ರಂದು ಉಪ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವ ಮೂಳಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಎಡಿಸಿ ಕೆ.ಆರ್‌.ದುರಗೇಶ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ, ರಾಜ್ಯದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮದ್ಯ, ಹಣ
ಸೇರಿ ಇನ್ನಿತರ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವವರ ಮೇಲೆ ಹದ್ದಿನ ಕಣ್ಣಿಡಬೇಕು. ಅಂತಾರಾಜ್ಯ ಚೆಕ್‌ ಪೋಸ್ಟ್‌ ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕಿದೆ. ಜಿಲ್ಲೆ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಮತದಾರರನ್ನು ಸೆಳೆಯಲು ವಿವಿಧ ವಸ್ತುಗಳ ಸಾಗಣೆ ಮಾಡುತ್ತಿದ್ದು, ಅದನ್ನು ತಡೆಯಬೇಕು ಎಂದರು.

ನೆರೆ ರಾಜ್ಯಗಳಿಂದ ಬರುವ ಪ್ರತಿ ವಾಹನವನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಜಿಲ್ಲೆಯ ಒಳಗಡೆ ಬಿಡಬೇಕು. ತೆಲಂಗಾಣ ರಾಜ್ಯದ ಗಡಿ ಭಾಗ ವ್ಯಾಪ್ತಿಯಲ್ಲಿ
ಬರುವ ಸಿಂಗನೋಡಿ, ಶಕ್ತಿನಗರ, ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಬರುವ ಇಡಪನೂರು, ಯರಗೇರಾ, ಚಿಕ್ಕಸೂಗೂರು ಗ್ರಾಮದಲ್ಲಿ ಚೆಕ್‌ಪೋಸ್ಟ್‌ಗಳನ್ನು
ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ ನೆರೆ ರಾಜ್ಯದ ಪೊಲೀಸ್‌ ಅ ಧಿಕಾರಿಗಳು ಸಹ ಪ್ರತ್ಯೇಕ್‌ ಚೆಕ್‌ಪೋಸ್ಟ್‌ ಸ್ಥಾಪಿಸಿ ಸಿಸಿ ಕ್ಯಾಮೆರಾ ಅಳವಡಿಸಿ ಹಚ್ಚಿನ ಬಂದೋಬಸ್ತ್ಗೆ ಪೊಲೀಸರನ್ನು ನಿಯೋಜಿಸಬೇಕು ಎಂದರು.

ಲಾರಿ ಮತ್ತು ಗೂಡ್ಸ್‌ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. 15 ಸಾವಿರಕ್ಕಿಂತ ಹೆಚ್ಚಿನ ಹಣ ಇದ್ದಲ್ಲಿ ದಾಖಲೆ ಪರಿಶೀಲಿಸಿ ವಾಹನ ಬಿಡುವಂತೆ ತಿಳಿಸಿದರು. ಎಸ್‌ಪಿ ಪ್ರಕಾಶ ನಿಕ್ಕಂ ಮಾತನಾಡಿ, ಜಿಲ್ಲೆಯ ಗಡಿ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಚೆಕ್‌ಪೋಸ್ಟ್‌ಗಳ ಮೇಲೆ ನಿಗಾ ವಹಿಸುವಂತೆ ತಿಳಿಸಿದರು. ರಾಯಚೂರು ಡಿವೈಎಸ್‌ಪಿ ಶಿವನಗೌಡ ಪಾಟೀಲ್‌, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಪೊಲೀಸ್ ಅಧಿಕಾರಿಗಳಾದ ಶ್ರೀನಿವಾಸಲು, ಜಿ.ಮಧುಸೂಧನ್ ರೆಡ್ಡಿ, ವೆಂಕಟೇಶ್ವರ, ಬಿ.ಶಂಕರ್‌, ಎಸ್‌.ಮುರಳಿ, ಮಧುಸೂಧನರಾವ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next