ಚೆನ್ನೈ: ಖ್ಯಾತ ಪತ್ರಕರ್ತ, ಅಂಕಣಕಾರ ಹಾಗೂ ತುಘಲಕ್ ಮ್ಯಾಗಜೀನ್ ಸಂಪಾದಕ ಎಸ್. ಗುರುಮೂರ್ತಿ ಅವರ ಮೇಲೆ ಒಂಬತ್ತು ಮಂದಿ ದುಷ್ಕರ್ಮಿಗಳು ಭಾನುವಾರ ನಸುಕಿನ ವೇಳೆ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿಗಳು ದಾಳಿಯನ್ನು ತಡೆದಿರುವುದಾಗಿ ವರದಿ ತಿಳಿಸಿದೆ.
ಪತ್ರಕರ್ತ ಗುರುಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಲು ಬಂದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಗುರುಮೂರ್ತಿ ಅವರ ಮನೆಯ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸರು ಅಪಾಯದ ಅಲಾರಂ ಮೊಳಗಿಸಿದ ಪರಿಣಾಮ ಐದು ಬೈಕ್ ಗಳಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ. ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದು, ಅದರಲ್ಲೊಬ್ಬ ವ್ಯಕ್ತಿ ಅನುಮಾನಾಸ್ಪದವಾದ ಬ್ಯಾಗ್ ಹೊಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಹೇಳಿಕೆ ಪ್ರಕಾರ, ಮೈಲಾಪುರದ ವರದರಾಜಪುರಂನಲ್ಲಿರುವ ಗುರುಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ್ದು, ಅಪರಿಚಿತ ವ್ಯಕ್ತಿಗಳು ಯಾವ ಕಾರಣಕ್ಕಾಗಿ ದಾಳಿ ನಡೆಸಲು ಬಂದಿದ್ದರು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ಹೇಳಿದೆ.
ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಕಮಿಷನರ್ ವಿಶ್ವನಾಥ್ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.