Advertisement

ಸರಕು ಸಾಗಣೆ ವಾಹನ ಚಾಲಕರಿಗೆ ಎಚ್ಚರಿಕೆ

09:04 PM May 04, 2019 | Team Udayavani |

ದೇವನಹಳ್ಳಿ: ಲಗೇಜು ಆಟೋ, ಟ್ರ್ಯಾಕ್ಟರ್‌, ಟೆಂಪೋ ಸೇರಿದಂತೆ ಇನ್ನಿತರ ಸರಕು ಸಾಗಣೆ ವಾಹನಗಳಲ್ಲಿ ಕಾನೂನು ಬಾಹೀರವಾಗಿ ಕೂಲಿ ಕಾರ್ಮಿಕರನ್ನು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಪ್ರಯಾಣಿರಕಂತೆ ಕರೆದೊಯ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಎಚ್ಚರಿಕೆ ನೀಡಿದರು. ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕಠಿಣ ಕ್ರಮ: ಸರಕುಗಳನ್ನು ಹೊತ್ತೂಯ್ಯುವ ಲಗೇಜು ಆಟೋ, ಟ್ರ್ಯಾಕ್ಟರ್‌, ಟೆಂಪೋಗಳಲ್ಲಿ ಕೂಲಿ ಕಾರ್ಮಿಕರನ್ನು, ಗಾರ್ಮೆಂಟ್ಸ್‌, ಕಾರ್ಖಾನೆಗಳ ಉದ್ಯೋಗಿಗಳನ್ನು, ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ, ಜನರನ್ನು ಸಾಗಾಟ ಮಾಡುವ ಸರಕು ವಾಹನಗಳನ್ನು ವಶಕ್ಕೆ ಪಡೆದು ಸಾರಿಗೆ ಕಾಯ್ದೆ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು. ಅಲ್ಲದೇ, ಇಂತಹ ವಾಹನಗಳ ಲೈಸನ್ಸ್‌ ರದ್ದು ಮಾಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿ: ಸರಕು ಸಾಗಿಸುವ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕುರಿಗಳ ರೀತಿ ತುಂಬಿಕೊಂಡು ಸಾಗುವ ದೃಶ್ಯ ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಇದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿರುವ 252 ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಹಾಗೂ 54 ಪದವಿ ಪೂರ್ವ ಕಾಲೇಜುಗಳಿಗೆ ಮಕ್ಕಳ, ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೈಗಾರಿಕಾ ಸಂಸ್ಥೆಗಳ ಪತ್ರ: ಜಿಲ್ಲೆಯಲ್ಲಿ ಒಟ್ಟು 660 ಕಾರ್ಖಾನೆಗಳು, 8,084 ನೋಂದಣಿಯಾಗಿರುವ ಒಟ್ಟು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, 14 ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಗಳಿವೆ. ಒಟ್ಟಾರೆ 1,58,692 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ಬಗ್ಗೆ ಸುರಕ್ಷತೆ ವಹಿಸುವಂತೆ ಕೈಗಾರಿಕಾ ಸಂಸ್ಥೆಗಳ ಮಾಲಿಕರಿಗೆ, ವಾಣಿಜ್ಯ ಸಂಸ್ಥೆಗಳಿಗೆ ಪತ್ರ ಬರೆಯಲಾಗುವುದೆಂದು ತಿಳಿಸಿದರು.

ಅರಿವು ಕಾರ್ಯಕ್ರಮ: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಖಾನೆಗಳು, ಬಾಯ್ಲರ್‌ಗಳ ಸುರಕ್ಷತಾ ಇಲಾಖೆ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.

Advertisement

ಇದರ ಅಂಗವಾಗಿ ಜಿಲ್ಲೆಯ ಕೈಗಾರಿಕಾ ಮಾಲಿಕರಿಗೆ, ಕಾರ್ಮಿಕರಿಗೆ, ಗಾರ್ಮೆಂಟ್ಸ್‌ ಉದ್ಯೋಗಿಗಳಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ನಾಲ್ಕೂ ತಾಲೂಕುಗಳಲ್ಲೂ ಸಭೆ, ರ್ಯಾಲಿ, ಕರಪತ್ರಗಳನ್ನು ಹಂಚುವ ಮೂಲಕ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಮೇ 13ರಿಂದ ಸಭೆ: ಮೇ 13 ರಂದು ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ, ಮೇ 20 ರಂದು ನೆಲಮಂಗಲದ ದಾಬಸ್‌ಪೇಟೆಯಲ್ಲಿ, ಮೇ 27 ರಂದು ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿ ರ್ಯಾಲಿ, ಕೈಗಾರಿಕಾ ಮಾಲಿಕರು ಹಾಗೂ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಸಭೆ, ಅರಿವು ಕಾರ್ಯಕ್ರಮ ಮತ್ತು ಜೂನ್‌ 3ರಂದು ದೇವನಹಳ್ಳಿಯಲ್ಲಿ ಕೈಗಾರಿಕಾ ಮಾಲಿಕರು ಹಾಗೂ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಸಭೆ, ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ವಿಶೇಷ ಅಭಿಯಾನ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ನಿವಾಸ್‌ ಸೆಪಟ್‌ ಮಾತನಾಡಿ, ಸಾರಿಗೆ ನಿಯಮಗಳನ್ನು ಉಲ್ಲಂ ಸುವ ಸರಕು ವಾಹನ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಶೇಷ ಅಭಿಯಾನವನ್ನು ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಜಗದೀಶ್‌, ಕಾರ್ಮಿಕಾಧಿಕಾರಿ ನಿರಂಜನ್‌, ಕಾರ್ಮಿಕ ನಿರೀಕ್ಷಿಕ ರವಿಕುಮಾರ್‌ ಸೇರಿದಂತೆ ಸಾರಿಗೆ, ಶಿಕ್ಷಣ, ಪೊಲೀಸ್‌ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next