ಬೆಂಗಳೂರು:ಇಸ್ರೋದ ಬಹುನಿರೀಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಕೆಲವು ಬಳಕೆದಾರರು ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಅವರ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆಯನ್ನು ತೆರೆದಿರುವುದು ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 7 ನಸುಕಿನ ವೇಳೆ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯೋದನ್ನು ಇಡೀ ದೇಶವೇ ಎದುರು ನೋಡುತ್ತಿತ್ತು. ಈ ಸಂದರ್ಭದಲ್ಲಿ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಭೂತಾನ್ ಮತ್ತು ದೇಶದ ವಿವಿಧ ರಾಜ್ಯದ 60-70 ವಿದ್ಯಾರ್ಥಿಗಳ ಜತೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉಪಸ್ಥಿತರಾಗಿದ್ದರು.
ಆದರೆ ವಿಕ್ರಮ್ ಲ್ಯಾಂಡರ್ 2.1 ಕಿಲೋ ಮೀಟರ್ ಅಂತರದಲ್ಲಿ ಚಂದ್ರನ ಅಂಗಳದಲ್ಲಿ ಇಳಿಯೋ ಹೊತ್ತಲ್ಲಿ ಸಂಪರ್ಕ ಕಡಿತಗೊಳ್ಳುವ ಮೂಲಕ ಲಕ್ಷಾಂತರ ಭಾರತೀಯರು ನಿರಾಸೆಗೊಂಡಿದ್ದರು. ಆದರೆ ಇಸ್ರೋ ವಿಜ್ಞಾನಿಗಳು ಯಶಸ್ಸು ಸಾಧಿಸುತ್ತೇವೆ ಎಂಬ ವಿಶ್ವಾಸದಲ್ಲಿದ್ದರು. ಏತನ್ಮಧ್ಯೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಭಾವೋದ್ವೇಗಕ್ಕೊಳಗಾಗಿದ್ದು, ಪ್ರಧಾನಿ ಮೋದಿ ಸಂತೈಸಿದ್ದರು.
ಸೆಪ್ಟೆಂಬರ್ 7ರ ಮುಂಜಾನೆಯ ಇಸ್ರೋದ ಐತಿಹಾಸಿಕ ಚಂದ್ರಯಾನ 2 ಏನಾಗಲಿದೆ ಎಂಬ ಕುತೂಹಲದಲ್ಲಿದ್ದಾಗಲೇ ಕೆಲವು ಟ್ವೀಟರ್ ಬಳಕೆದಾರರು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಹೆಸರನ್ನು ಬಳಸಿಕೊಂಡು ನಕಲಿ ಖಾತೆ ಮೂಲಕ ಸಾವಿರಾರು ಟ್ವೀಟರ್ ಬಳಕೆದಾರರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಫೇಕ್ ಟ್ವೀಟರ್ ಖಾತೆ-01
ಇದು ಡಾ.ಶಿವನ್ ಅವರ ಹೆಸರಲ್ಲಿ ಕೆಲವು ಅನಾಮಿಕ ಟ್ವೀಟರ್ ಬಳಕೆದಾರ ತೆರೆದ ಮೊದಲ ನಕಲಿ ಖಾತೆ ಇದಾಗಿದೆ. ಡಾ.ಶಿವನ್ ಅವರ ಫೋಟೋ ಹಗೂ ಭೂಮಿಯ ಫೋಟೋವನ್ನು ಉಪಯೋಗಿಸಿ @kailasavadivoo ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ. ಬಯೋಡಾಟದಲ್ಲಿ ಇಸ್ರೋ ಅಧ್ಯಕ್ಷ ಎಂದು ನಮೂದಿಸಿದ್ದು, ಈ ಖಾತೆಯನ್ನು ಬೆಂಗಳೂರಿನಿಂದ ಅಪ್ ಡೇಟ್ ಮಾಡಲಾಗಿದೆ.
ಈ ನಕಲಿ ಖಾತೆಯನ್ನು ಸೆಪ್ಟೆಂಬರ್ 7ರಂದು ತೆರೆದಿದ್ದು, ಸಂಜೆ 4.25ರ ವೇಳೆಗೆ 4 ಸಾವಿರ ಮಂದಿ ಫಾಲೋವರ್ಸ್ ಬಂದಿದ್ದರು. ಮರುದಿನ ಫಾಲೋವರ್ಸ್ ಸಂಖ್ಯೆ 51,200ಕ್ಕೆ ಏರಿಕೆಯಾಗಿತ್ತು. ಈ ಟ್ವೀಟರ್ ಖಾತೆ ಈಗ ಡಿಲೀಟ್ ಮಾಡಲಾಗಿದೆ.
2ನೇ ನಕಲಿ ಖಾತೆ:
ಸೆಪ್ಟೆಂಬರ್ 7ರಂದು ಮತ್ತೊಂದು ನಕಲಿ ಖಾತೆ ತೆರೆದಿದ್ದು, ಕೈಲಾಸವಾದಿವೊ ಸಿವನ್ ಅವರ ಹೆಸರನ್ನು ಉಪಯೋಗಿಸಿಕೊಂಡು ಅದೇ ಫೋಟೋ, ಕವರ್ ಇಮೇಜ್ ಬಳಸಿ ನಕಲಿ ಖಾತೆ ಮಾಡಿದ್ದರು.
ಈ ಖಾತೆಯಲ್ಲಿ ಇಸ್ರೋದ ಬಹುನಿರೀಕ್ಷಿತ ಯೋಜನೆಗಳನ್ನು ಪಿನ್ ಮಾಡಿ ಟ್ವೀಟ್ ಮಾಡಲಾಗಿದ್ದು, ಒಂದು ಗಂಟೆಯೊಳಗೆ 17,300 ಫಾಲೋವರ್ಸ್ ಬಂದಿದ್ದರು. ನಕಲಿ ಖಾತೆ ಒಂದು ದಿನದೊಳಗೆ 41 ಸಾವಿರ ಫಾಲೋವರ್ಸ್ ಪಡೆದಿತ್ತು. ಬಳಿಕ ಖಾತೆದಾರರ ಹೆಸರನ್ನು ಕ್ಯಾಪ್ಟನ್ ರಾಣಾ ಎಂದು ಫೋಟೊ ಸಹಿತ ಬದಲಾಯಿಸಿದ್ದರು. ಇದೀಗ ನಕಲಿ ಖಾತೆ ಹೀಗೆ ಕಾಣಿಸುತ್ತಿದೆ.
ಹೆಸರು, ಫೋಟೋ ಬದಲಾಯಿಸುತ್ತಿದ್ದಂತೆಯೇ ಫಾಲೋವರ್ಸ್ ಸಂಖ್ಯೆ ಇಳಿಕೆಯಾಗಿದ್ದು, ಅದರ ಸಂಖ್ಯೆ 40 ಸಾವಿರವಾಗಿದೆ.
ಫೇಕ್ ಟ್ವೀಟರ್ ಖಾತೆ-03:
ಮತ್ತೊಂದು ನಕಲಿ ಟ್ವೀಟರ್ ಖಾತೆಯನ್ನು ಡಾ.ಶಿವನ್ ಅವರ ಹೆಸರು, ಫೋಟೋ ಬಳಸಿಕೊಂಡು ತೆರೆದಿದ್ದಾರೆ. ಇದು ಸುಮಾರು 9000 ಸಾವಿರ ಫಾಲೋವರ್ಸ್ ಪಡೆದಿದ್ದು, ಈ ಖಾತೆ ಈಗ ನಿಷ್ಕ್ರಿಯವಾಗಿದೆ.
ನಕಲಿ ಟ್ವೀಟರ್ ಖಾತೆ-04:
ಈ ನಕಲಿ ಟ್ವೀಟರ್ ಖಾತೆಯನ್ನು ಡಾ.ಶಿವನ್ ಅವರ ಕಚೇರಿಯ ಅಧಿಕೃತ ಖಾತೆ ಎಂಬಂತೆ ಬಿಂಬಿಸಲಾಗಿದೆ. ಆಫೀಸ್ ಆಫ್ ಶಿವನ್ ಎಂಬ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆ ತೆರೆದಿದ್ದರು. Aim for the moon. If you miss, you ll land among the stars” ಎಂದು ಬರೆಯಲಾಗಿದೆ! ಈ ಖಾತೆ 1,723 ಫಾಲೋವರ್ಸ್ ಪಡೆದಿತ್ತು. ಇದೀಗ ಖಾತೆ ನಿಷ್ಕ್ರಿಯವಾಗಿದೆ.