ಹೊಸದಿಲ್ಲಿ : ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲು ಪಾಸಾಗುವುದನ್ನು ಕಾಯುತ್ತಾ ವಾಹನಗಳು ನಿಂತಿರುವ ದೃಶ್ಯ ವಿಶ್ವದೆಲ್ಲೆಡೆ ಸರ್ವ ಸಾಮಾನ್ಯ. ಆದರೆ ಗ್ವಾಲಿಯರ್‌ನಲ್ಲಿ ಇಂದು ಸೋಮವಾರ ತದ್ವಿರುದ್ದ ಸ್ಥಿತಿ ಕಂಡು ಬಂತು !
ಸುಮಾವಾಲಿ ಮತ್ತು ಗ್ವಾಲಿಯರ್ ನಡುವೆ ನ್ಯಾರೋ ಗೇಜ್‌ನಲ್ಲಿ ಸಾಗಿ ಬರುತ್ತಿದ್ದ ರೈಲಿನ ಚಾಲಕನಿಗೆ ರಾಮದಾಸ್ ಘಾಟಿಯಲ್ಲಿ ಇನ್ನೊಂದು ಟ್ರ್ಯಾಕಿನ ಮೇಲೆ ಎಸ್‌ಯುವಿ ಕಾರೊಂದನ್ನು ನಿಲ್ಲಿಸಲಾಗಿರುವುದು ಕಂಡು ಬಂತು.
ಒಡನೆಯೇ ಜಾಗೃತೆ ವಹಿಸಿದ ನ್ಯಾರೋ ಗೇಜ್ ರೈಲು ಚಾಲಕ ಸರಿಯಾಗಿ ಆ ತಾಣದಲ್ಲೇ ತನ್ನ ರೈಲನ್ನು ನಿಲ್ಲಿಸಿದ. ಟ್ರ್ಯಾಕ್ ನಡುವೆ ಎಸ್‌ಯುವಿ ಕಾರೊಂದನ್ನು ನಿಲ್ಲಿಸಲಾಗಿದೆ ಎಂಬ ವಿಷಯವನ್ನು ಆತ ರೈಲಲ್ಲೇ ಇದ್ದ ರೈಲ್ವೇ ಪೊಲೀಸ್ ಪಡೆಗೆ ತಿಳಿಸಿದ.
ರೈಲು ಟ್ರ್ಯಾಕ್ ಮೇಲೆಯೇ ಎಸ್‌ಯುವಿ ಕಾರನ್ನು ನಿಲ್ಲಿಸಿದ್ದ ಚಾಲಕ ಮಹಾಶಯನಿಗಾಗಿ ರೈಲ್ವೇ ಅಧಿಕಾರಿಗಳು ಮತ್ತು ಸಿಬಂದಿಗಳು ತಾಸುಗಟ್ಟಲೆ ಹುಡುಕಾಡಿಯೂ ಪ್ರಯೋಜನವಾಗಲಿಲ್ಲ. ಇದರಿಂದ ಇತರ ರೈಲುಗಳ ಸಂಚಾರಕ್ಕೂ ಧಕ್ಕೆ ಉಂಟಾಯಿತು. ತಾಸುಗಟ್ಟಲೆ ವಿಳಂಬಕ್ಕೆ ಕಾರಣವಾಯಿತು. ಪ್ರಯಾಣಿಕರು ಆಕ್ರೋಶಿತರಾದರು.
ಕೊನೆಗೆ ರೈಲ್ವೇ ಅಧಿಕಾರಿಗಳು ಮತ್ತು ಸಿಬಂದಿಗಳು, ಈ ಪ್ರಹಸನವನ್ನು ಕುತೂಹಲದಿಂದ ಅವಲೋಕಿಸುತ್ತಾ ಜಮಾಯಿಸಿದ ಜನರ ನೆರವು ಪಡೆದು ಕಾರನ್ನು ಟ್ರ್ಯಾಕಿನಿಂದ ಸರಿಸಿ ತೆರವುಗೊಳಿಸಿದರು.
ರೈಲ್ವೇ ಪೊಲೀಸರೀಗ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರ ಮಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.