Advertisement
ಊರಿನಿಂದ ಕೇವಲ 21 ಕಿ.ಮೀ. ದೂರದಲ್ಲಿರುವ ಚಾರ್ಮಾಡಿ ಘಾಟ್‌ಗೆ ಎಲ್ಲರ ಇಚ್ಛೆಯಂತೆ 7 ಜನರ ತಂಡ 4 ಬೈಕ್‌ನಲ್ಲಿ ಹೊರಟು ಬಿಟ್ಟಿತು. ಘಾಟಿ ರಸ್ತೆಗಳು ತುಂಬಾ ಎತ್ತರವಾಗಿದ್ದು, ಹಾವು ಸುತ್ತಿದಂತೆ ವಕ್ರವಕ್ರವಾಗಿದ್ದವು. ಇಲ್ಲಿ ಸಾಗುವಾಗ ನಮ್ಮ ಕಿರುಚಾಟ, ಬೊಬ್ಬೆಗಳಿಗೇನೂ ಕಡಿಮೆಯಿಲ್ಲ. ಬೈಕ್‌ನ ಹಿಂದೆ ಕುಳಿತವರಿಗೆ ಸೆಲ್ಫಿ ತೆಗೆಯುವ ಕೆಲಸವಾದರೆ ಬೈಕ್ ಸವಾರರು ನಿಧಾನವಾಗಿ ಚಲಿಸಬೇಕಿದ್ದರಿಂದ ಧ್ಯಾನವೆಲ್ಲ ರಸ್ತೆಯ ಕಡೆಗೆ ಇರಿಸಬೇಕಾಗಿತ್ತು.
Related Articles
Advertisement
ಇದನ್ನು ಅಲೆಕ್ಕಾನ ಫಾಲ್ಸ್ ಅಥವಾ ಚಾರ್ಮಾಡಿ ಫಾಲ್ಸ್ ಎನ್ನುತ್ತಾರೆ ಎಂದು ಗೆಳತಿಯೊಬ್ಬಳು ಅನುಭವದ ಮಾತನ್ನು ಹೊರಹಾಕಿದಳು. ಘಾಟಿಗೆ ಬಂದವರಲ್ಲಿ ಈ ಜಲಪಾತವನ್ನು ನೋಡದೇ ಹೋಗುವವರು ಹೆಚ್ಚು. ಏಕೆಂದರೆ ಅಲ್ಲಿ ಹಾಕಿರುವ ಎಚ್ಚರಿಕಾ ಫಲಕವನ್ನು ಕಂಡು ತಮ್ಮ ಸಂಸಾರದ ಜತೆ ಕಾರಿಡಾರ್ ದಾಟಿ ಬರಲು ಹಿಂಜರಿಯುತ್ತಾರೆ. ನಾವು ಆ ಜಲಪಾತದಿಂದ 100 ಮೀ. ದೂರದಲ್ಲಿ ನಿಂತಿದ್ದರೂ ಮೇಲಿಂದ ಬೀಳುತ್ತಿರುವ ನೀರು ಕೆಳಗಿನ ಕಲ್ಲಿಗೆ ಅಪ್ಪಳಿಸಿ ನಮ್ಮ ಮೇಲೆಯೇ ಎರಗುತ್ತಿದ್ದವು. ಇದರ ಎತ್ತರ ಸುಮಾರು 300 ಮೀ. ಗಳಷ್ಟಿರಬಹುದು. ಇದರ ಕೆಳಗೆ ನಿಂತು ಮೋಜುಮಸ್ತಿ ಮಾಡಬಹುದು ಎಂದುಕೊಂಡರೆ ಮೂಳೆ ಕೂಡ ಸಿಗಲಾರದು ಎಂಬುದು ಖಚಿತ. ಆದರೂ 30 ಮೀಟರ್ ದೂರದಲ್ಲಿ ಆಟವಾಡತೊಡಗಿದೆವು.
ಅಷ್ಟರಲ್ಲಿ ಗೆಳತಿಯೊಬ್ಬಳ ಬಾಯಿಯಿಂದ ಹಸಿವಿನ ಪದ ಹೊರಬಿತ್ತು. ಏಕೆಂದರೆ ಅಮ್ಮ ಮಾಡಿಕೊಟ್ಟ ಪಲಾವ್ ಅವಳ ಬ್ಯಾಗಿನಿಂದ ಅವಳನ್ನು ಕರೆಯುತ್ತಿತ್ತು. ಚಿಕ್ಕ ಬುತ್ತಿಯಾದರು ಎಂಟು ಜನರು ಕೂಡ ಅವಳ ಬುತ್ತಿಗೆ ಮುಗಿಬಿದ್ದೆವು. ಒಬ್ಬೊಬ್ಬರಿಗೆ ಒಂದೊಂದೇ ತುತ್ತು ಸಿಕ್ಕಿದರೂ ಹಸಿವು ನೀಗಿದ ಅನುಭವವಾಯಿತು.
ಅಲ್ಲೇ ಹತ್ತಿರ ಜಲಪಾತವನ್ನೇ ಹೋಲುವ ಚಿಕ್ಕದೊಂದು ನೀರು ಹರಿದು ಬರುವ ಜಾಗ ಕಂಡು ಅಲ್ಲಿ ಎಲ್ಲರೂ ನೀರಿನ ಕೆಳಗಡೆ ಕುಳಿತು ಚಳಿ ಎಂಬುದನ್ನೇ ಮರೆತು ಸಂಭ್ರಮಿಸಿದೆವು. ಸುಮಾರು 3 ಗಂಟೆಗಳ ಕಾಲ ಕಳೆದು ಒದ್ದೆ ಬಟೆಯಲ್ಲೇ ಗಾಡಿ ನಿಲ್ಲಿಸಿದ ಸ್ಥಳಕ್ಕೆ ಬರುತ್ತಿದ್ದಾಗ ಅಲ್ಲಿ ನೆರೆದಿದ್ದ ಪ್ರವಾಸಿಗರೆಲ್ಲರೂ ದುರುಗುಟ್ಟಿ ನೋಡಿದಂತೆ ಭಾಸವಾಗುತ್ತಿತ್ತು. ಏಕೆಂದರೆ ನಾವು ಪಡೆದ ಜಲಪಾತದ ಖುಷಿ ಅವರು ಪಡೆದಿರಲಿಲ್ಲ. ಅಷ್ಟರಲ್ಲಿ ಮಧ್ಯಾಹ್ನವಾಗಿದ್ದರೂ ಚಳಿಯಂತೂ ಕಡಿಮೆಯಾಗಿರಲಿಲ್ಲ. ಹಾಗೇ ಬೈಕ್ ಹತ್ತಿ ಮನೆಯತ್ತ ಹಿಂತಿರುಗುತ್ತಿದ್ದಾಗ ಜೇನುಕಲ್ಲಿನ ಪಕ್ಕ ನೋಡಿದ್ದ ಚರುಂಬುರಿ ಮತ್ತು ಬಿಸಿ ಜೋಳದ ಅಂಗಡಿಗೆ ಹೋಗಿ ಹೊಟ್ಟೆ ತುಂಬುವವರೆಗೂ ತಿಂದು, ಅಲ್ಲೇ ನೆರೆದಿದ್ದ ಕೋತಿಗಳ ಜತೆಗೆ ಆಟವಾಡಿ, ಮರಳಿ ಬೆಳ್ತಂಗಡಿ ತಲುಪಿದಾಗ ಮಧ್ಯಾಹ್ನ ಎರಡು ಗಂಟೆ ಕಳೆದಿತ್ತು.
ರೂಟ್ ಮ್ಯಾಪ್· ಮಂಗಳೂರಿನಿಂದ ಬೆಳ್ತಂಗಡಿಗೆ 60 ಕಿ.ಮೀ. ದೂರ.
· ಬೆಳ್ತಂಗಡಿಯಿಂದ ಚಾರ್ಮಾಡಿ 21 ಕಿ.ಮೀ. ದೂರದಲ್ಲಿದೆ.
· ಬಸ್ ಸೌಲಭ್ಯ ಸಾಕಷ್ಟಿದೆ. ಉತ್ತಮ.
· ಖಾಸಗಿ ವಾಹನ ಮಾಡಿಕೊಂಡು ತೆರಳಿದರೆ ಉತ್ತಮ.
· ಘಾಟಿ ಪ್ರದೇಶವಾದ್ದರಿಂದ ಊಟ, ವಸತಿ ವ್ಯವಸ್ಥೆ ಹತ್ತಿರದಲ್ಲಿಲ್ಲ.
· ತಿಂಡಿ, ನೀರು ಕಟ್ಟಿಕೊಂಡು ಹೋದರೆ ಹೆಚ್ಚು ಹೊತ್ತು ಕಾಲಕಳೆಯಲು ಅನುಕೂಲ ವಿಕ್ರಮ್ ಗಾಣಿಗ ಕುದ್ರಡ್ಕ