Advertisement

ಬತ್ತಿದ ಬೀರಂಜಿ ಹಳ್ಳ; ನೀರಿಗಾಗಿ ಪರದಾಟ

05:36 PM May 17, 2019 | Team Udayavani |

ಆಲ್ದೂರು: ಪಟ್ಟಣದ ಬಹುತೇಕ ಭಾಗಗಳಿಗೆ ನೀರೊದಗಿಸುವ ನೀರಿನ ಮೂಲವಾದ ಬೀರಂಜಿ ಹಳ್ಳ ಸಂಪೂರ್ಣ ಬತ್ತಿ ಹೋಗಿದ್ದು, ಇದರಿಂದಾಗಿ ಜನ ಜಾನುವಾರುಗಳು ಪರದಾಡುವಂತಾಗಿದೆ.

Advertisement

ಬಿಸಿಲ ಧಗೆಗೆ ಭೂಮಿಯ ಮೇಲೆ ಇದ್ದ ಅಲ್ಪಸ್ವಲ್ಪ ನೀರು ಸಹ ಖಾಲಿಯಾಗುತ್ತಿದ್ದು, ನೀರಿನ ಮೂಲಗಳು ಒಂದೊಂದಾಗಿ ಬತ್ತಲು ಪ್ರಾರಂಬಿಸಿವೆ. ಆಲ್ದೂರು ಪಟ್ಟಣದ ಮುಖ್ಯ ರಸ್ತೆಯ ಬಹುಭಾಗಗಳಿಗೆ ಈ ಬೀರಂಜಿ ಹಳ್ಳದಿಂದಲೇ ನೀರು ಪೂರೈಸಲಾಗುತ್ತಿತ್ತು. ಇದೀಗ ಹಳ್ಳದಲ್ಲಿ ನೀರು ಬತ್ತಿದ್ದು, ಜನ ಕುಡಿಯುವ ನೀರಿಗಾಗಿ ದೂರದ ಬೋರ್‌ವೆಲ್ ಹಾಗೂ ಬಾವಿಗಳನ್ನು ಅವಲಂಬಿಸುವಂತಾಗಿದೆ.

ಈ ಬಾರಿ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್ಗಳು ಬತ್ತಿ ಹೋಗಿದ್ದು, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ನಿಂದ ಪಟ್ಟಣಕ್ಕೆ ದಿನ ಬಿಟ್ಟು ದಿನ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಈ ನೀರಿನ ಅಭಾವದ ಮಧ್ಯೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ಪ್ರತಿದಿನ ವಿದ್ಯುತ್‌ ವ್ಯತ್ಯಯದಿಂದಾಗಿ ಹಳ್ಳದಲ್ಲಿರುವ ಅಲ್ಪಸ್ವಲ್ಪ ನೀರನ್ನು ಸಹ ಟ್ಯಾಂಕ್‌ಗಳಿಗೆ ತುಂಬಿಸಲು ತೊಂದರೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಶುಂಟಿ ಬೆಳೆಯೂ ಸಹ ನೀರಿನ ಮೂಲಕ್ಕೆ ಕುತ್ತು ತಂದಿದೆ. ಮಲೆನಾಡಿನಲ್ಲಿ ಈ ಬಾರಿ ಸಾಕಷ್ಟು ರೈತರು ಶುಂಟಿ ಬೆಳೆದಿದ್ದು, ಹಳ್ಳಗಳಿಂದಲೇ ಶುಂಟಿ, ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿರುವುದರಿಂದ ಕುಡಿಯುವ ನೀರಿಗೆ ಇನ್ನಷ್ಟು ಅಭಾವ ಉಂಟಾಗಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಹಳ್ಳದಲ್ಲಿ ನೀರು ಬೇಗ ಬತ್ತಿ ಹೋಗಿದ್ದು, ಮಳೆ ಬರುವವರೆಗೂ ನೀರಿನ ಅಭಾವ ತಪ್ಪಿದ್ದಲ್ಲ. ಮಲೆನಾಡಿನಲ್ಲಿ ಈ ಬಾರಿ ಬಿಸಿಲ ಧಗೆಯೂ ಬಿಸಿಲನಾಡನ್ನು ನೆನಪಿಸುತ್ತಿದ್ದು, ಒಂದೆಡೆ ಬಿಸಿಲ ಧಗೆಯಿಂದ ಬಸವಳಿದಿದ್ದರೆ , ಮತ್ತೂಂದೆಡೆ ನೀರಿನ ಅಭಾವದಿಂದ ತೊಂದರೆ ಅನುಭವಿಸುವಂತಾಗಿದೆ.

Advertisement

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಆಲ್ದೂರು ಪಟ್ಟಣಕ್ಕೆ ಶ್ವಾಶ್ವತ ಕುಡಿಯುವ ನೀರಿನ ಯೋಜನೆ ಮರೀಚಿಕೆಯಾಗಿವೆ. ಹೀಗಾಗಿ ಬೇಸಿಗೆ ಪ್ರಾರಂಭವಾದರೆ ಪಟ್ಟಣದಲ್ಲಿ ನೀರಿಗೆ ತಾತ್ವಾರ ಉಂಟಾಗುತ್ತದೆ.

ಕೆಲವರು ನೀರಿನ ಹಾಹಾಕಾರದಿಂದಾಗಿ ದುಡ್ಡು ಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀರು, ಚರಂಡಿ, ರಸ್ತೆ ಎಂದು ಅಜೆಂಡಾ ಇಟ್ಟುಕೊಟ್ಟು ಓಟು ಪ‌ಡೆದು ಗೆದ್ದು ಬರುವ ಸದಸ್ಯರು, ನಂತರದ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನೇ ಮರೆತು ಬಿಡುತ್ತಾರೆ ಎಂದು ಪಟ್ಟಣದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 2 ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಉತ್ತಮ ಮಳೆಯಾದರೆ ಸ್ವಲ್ಪ ಮಟ್ಟಿಗಾದರೂ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹಾಗೂ ಹಳ್ಳದ ನೀರನ್ನು ಒಡ್ಡುಗಟ್ಟಿ ಅಕ್ರಮವಾಗಿ ಶುಂಟಿ ಬೆಳೆಗೆ ನೀರನ್ನು ಹಾಯಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಂಡರೆ ನೀರಿನ ಬವಣೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಆಲ್ದೂರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಶೀಘ್ರವೇ ಆಗಬೇಕಿದ್ದು, ಹಾಗಾದಾಗ ಮಾತ್ರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಧ್ಯ ಎಂಬುದು ಪಟ್ಟಣ ನಿವಾಸಿಗಳ ಒತ್ತಾಸೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next