ಆಲ್ದೂರು: ಮಲೆನಾಡಿನಲ್ಲಿ ಮತ್ತೆ ಮಳೆಯಾಗಿದ್ದು, ಕಾಫಿ ಬೆಳೆಗಾರರ ನಿದ್ದೆಗೆಡಿಸಿದೆ. ಕಾಫಿ ಕೊಯ್ಲು ಆರಂಭಗೊಂಡಿದ್ದು, ಶನಿವಾರ ರಾತ್ರಿಯಿಂದಲೇ ಬೀಳುತ್ತಿರುವ ತುಂತುರು ಮಳೆ ಬೆಳೆಗಾರರನ್ನು ಚಿಂತೆಗೀಡುಮಾಡಿದೆ.
ಈ ಭಾಗದಲ್ಲಿ ನವೆಂಬರ್ -ಡಿಸೆಂಬರ್ ಕಾಫಿ ಕೊಯ್ಲು ಆರಂಭವಾಗುವ ಸಮಯ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೈಗೆ ಪಡೆಯುವ ಹೊತ್ತಿನಲ್ಲಿ ದಿಢೀರನೇ ಮತ್ತೆ ಮಳೆಯಾಗುತ್ತಿದ್ದು, ಬೆಳೆನಷ್ಟವಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯ ದಿಂದಾಗಿ ಈ ಬಾರಿ ಸುರಿಯುತ್ತಿರುವ ಮಳೆ ಬೆಳೆಗಾರರನ್ನು ಕಾಡುತ್ತಿದೆ. ಜೂನ್ ತಿಂಗಳಿನಿಂದಲೂ ಎಡಬಿಡದೆ ಸುರಿದ ಮಳೆ ಕಾಫಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇದರಿಂದಾಗಿ ಅರ್ಧಭಾಗದಷ್ಟು ಕಾಫಿ ಫಸಲು ನೆಲಕಚ್ಚಿತ್ತು.
ನವೆಂಬರ್ ತಿಂಗಳಿನಿಂದ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಮತ್ತೆ ಮಳೆ ಆರಂಭವಾಗಿದ್ದು, ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಗಾಯದ ಮೇಲೆ ಬರೆ ಎಳೆದಂತೆ ಕಾರ್ಮಿಕರ ಸಮಸ್ಯೆಯೂ ಬೆಳೆಗಾರರನ್ನು ಚಿಂತೆಗೆ ತಳ್ಳಿದೆ. ಇರುವ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಬೆಳೆಗಾರರು ಸದ್ಯ ಕೆಲಸಕ್ಕೆ ದೊರಕುತ್ತಿರುವ ಬೆರಳೆಣಿಕೆಯಷ್ಟು ಕಾರ್ಮಿಕರಿಗೆ ದುಪ್ಪಟ್ಟು ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ಮಲೆನಾಡಿನಲ್ಲಿ ಕಾಫಿಯೇ ಪ್ರಮುಖ ಆದಾಯದ ಮೂಲವಾಗಿದ್ದು, ಸುರಿಯುತ್ತಿರುವ ಮಳೆಯಿಂದ ಕಾಫಿ ನೆಲಕಚ್ಚುತ್ತಿದೆ.
ಫಿಲ್ಪರ್ ಮಾಡಿದ ಕಾಫಿಯನ್ನು ಒಣಗಿಸಲು ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಅಡ್ಡಿಯಾಗಿದೆ. ಕಾಫಿ ಬೇಳೆ ಕಪ್ಪಾಗಿ ಗುಣಮಟ್ಟ ಹಾಳಾಗುತ್ತಿದೆ. ಒಂದು ತಿಂಗಳು ಮುಂಚಿತವಾಗಿಯೇ ಕಾಫಿ ಕಟಾವಿಗೆ ಬಂದಿದ್ದು, ಕಾಫಿಯ ಗುಣಮಟ್ಟ ಕುಸಿತ ಕಂಡಿದೆ. ಬೇಳೆ ತೂಕವೂ ಕಡಿಮೆಯಾಗುತ್ತಿದೆ. ಹವಾಮಾನ ವೈಪರೀತ್ಯ ಕಾರ್ಮಿಕರ ಕೊರತೆ, ರಸಗೊಬ್ಬರಗಳ ಏರಿಕೆಯಿಂದ ತೋಟಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಬೆಳೆಗಾರರು ವರ್ಷದಿಂದ ವರ್ಷಕ್ಕೆ ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಕಾಫಿ ಬೆಳೆಗಾರ ಭಾಸ್ಕರ್.