ಆಲ್ದೂರು: ನಿವೇಶನಕ್ಕಾಗಿ ಆಗ್ರಹಿಸಿ ಸತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ 200ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 167ರಲ್ಲಿ 117 ಎಕರೆ ಜಾಗವಿದ್ದು, ಅದರಲ್ಲಿ ಮಾಚಗೊಂಡನಹಳ್ಳಿ, ಸತ್ತಿಹಳ್ಳಿ, ಎಲೆಗುಡಿಗೆ, ಇಂದಿರಾನಗರ, ಈದ್ಗಾ ಮೊಹಲ್,ದೇವಿಗುಡ್ಡ, ಹರವಿನಗಂಡಿ ಪಾಳ್ಯ, ಕಾರೆಹಟ್ಟಿ ಗ್ರಾಮಗಳ ನಿರಾಶ್ರಿತ ಕುಟುಂಬಗಳು ಗುಡಿಸಲುಗಳನ್ನು ನಿರ್ಮಿಸಿಕೊಂಡು ನಿವೇಶನಕ್ಕಾಗಿ ಧರಣಿ ನಡೆಸುತ್ತಿವೆ.
ಸರ್ವೆ ನಂ. 167ರಲ್ಲಿ 117 ಎಕರೆ ಸರ್ಕಾರಿ ಕಂದಾಯ ಜಾಗವಿದ್ದು, ಅದು ಬಹುತೇಕ ಒತ್ತುವರಿಯಾಗಿ ಕಾμ ತೋಟಗಳಾಗಿವೆ. ಈಗ ಕೇವಲ 6 ಎಕರೆ ಜಾಗ ಮಾತ್ರ ಉಳಿದಿದೆ. ಜಿಲ್ಲಾಧಿಕಾರಿಗಳು 2006ರಲ್ಲಿ 10 ಎಕರೆ ಜಾಗವನ್ನು ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಿದ್ದು, ಈ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಲು ಸಂಬಂಧಪಟ್ಟ ಗ್ರಾಪಂ ವಿಫಲವಾಗಿದೆ ಎಂದು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಹಾಂದಿ ಗ್ರಾಮದ ವಿನೋದ್ ದೂರಿದರು.
ಸರ್ವೆ ನಂಬರ್ 167ರಲ್ಲಿರುವ 117 ಎಕರೆ ಜಾಗ ಪ್ರಭಾವಿಗಳಿಂದ ಒತ್ತುವರಿಯಾಗಿದೆ. ಫಾರಂ ನಂಬರ್ 57ರಲ್ಲಿ ಇದೇ ಜಾಗಕ್ಕೆ 74 ಜನ ಅರ್ಜಿ ಸಲ್ಲಿಸಿದ್ದಾರೆ. ಫಾರಂ ನಂಬರ್ 53 ಹಾಗೂ 94 ಸಿ ನಲ್ಲಿ ಸಾಕಷ್ಟು ಜನ ಜಾಗ ಮಂಜೂರು ಮಾಡಿಸಿಕೊಂಡಿದ್ದು, ಉಳಿದಿರುವ 16 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ನಿವೇಶನಕ್ಕೆ ಕಾಯ್ದರಿಸಿದ್ದಾರೆ. ಈ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದೇವೆ.
ನಮ್ಮನ್ನು ತೆರವು ಮಾಡಿಸಲು ಅರಣ್ಯ ಇಲಾಖೆ ಮೇಲೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಗುಡಿಸಲು ಹಾಕಿಕೊಂಡ ಕುಟುಂಬಗಳು ಬಹುತೇಕ ಕಾರ್ಮಿಕರಾಗಿದ್ದು, ಸೂರಿಗಾಗಿ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೂಲಿ ಕೆಲಸವಿಲ್ಲದೇ ಒಂದು ಒತ್ತು ಊಟಕ್ಕೂ ಪರದಾಡುತ್ತಿರುವ ಈ ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲ. ಬಾಡಿಗೆ ಮನೆಗೆ ಮೂರು ಸಾವಿರ ರೂ.ಬಾಡಿಗೆ ಹಾಗೂ 50 ಸಾವಿರ ರೂ. ಅಡ್ವಾನ್ಸ್ ನೀಡಬೇಕು. ಕೂಲಿ ಮಾಡುವವರು ಇಷ್ಟು ಹಣ ಎಲ್ಲಿಂದ ತರಲು ಸಾಧ್ಯ? ಈ ಸಮಸ್ಯೆ ಬಗೆಹರಿಸಬೇಕಾದ ಗ್ರಾಮ ಪಂಚಾಯಿತಿ ಪ್ರಭಾವಿಗಳಿಗೆ ಮಣಿದು ಕೈಕಟ್ಟಿ ಕುಳಿತಿದೆ ಎಂದು ದೂರಿದರು.
ಅರಣ್ಯ ಇಲಾಖೆಯವರು ನಮಗೆ ತೊಂದರೆ ಕೊಡುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆ ಮುಖಾಂತರ ನಮ್ಮನ್ನು ತೆರವು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ರವಿ, ಸುಂದರೇಶ್, ವಿನೋದ್‌ರಾಜ್ ಅವರು ಅಸಮಧಾನ ವ್ಯಕ್ತಪಡಿಸಿದರು.
ಆಲ್ದೂರು ವಲಯ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಲವು ಬಾರಿ ಪ್ರಯತ್ನಿಸಿದರೂ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಒಂದು ಬಾರಿ ಕರೆ ಸ್ವೀಕರಿಸಿದರಾದರೂ ಮಾಹಿತಿ ನೀಡದೆ ಸಂಪರ್ಕ ಕಡಿತಗೊಳಿಸಿದರು.