Advertisement

ಕೋವಿಡ್: ಗಾಳಿ ಸುದ್ದಿಗೆ ಆತಂಕಕ್ಕೀಡಾದ ಜನ

03:28 PM Jul 03, 2020 | Naveen |

ಆಲ್ದೂರು: ಪಟ್ಟಣದ ಸಂತೆ ಮೈದಾನದಲ್ಲಿ ವ್ಯಕ್ತಿಯೋರ್ವರಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ಗಾಳಿ ಸುದ್ದಿ ಬುಧವಾರ ಪಟ್ಟಣದ ತುಂಬ ಹರಿದಾಡಿದ್ದು, ಜನ ಆತಂಕಕ್ಕೆ ಒಳಗಾಗಿದ್ದರು. ಪಟ್ಟಣದಲ್ಲಿ ಇಂತಹ ಪ್ರಕರಣಗಳು ಯಾವುದೂ ವರದಿಯಾಗಿಲ್ಲ. ಇತ್ತೀಚೆಗೆ ಕೋವಿಡ್ ವೈರಸ್‌ ಕುರಿತಂತೆ ಗಾಳಿ ಸುದ್ದಿಗಳು, ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಾಯಿಂದ ಬಾಯಿಗೆ ಹರಿದಾಡುತ್ತಿದ್ದು, ಜನ ಸುಖಾಸುಮ್ಮನೆ ಆತಂಕಕ್ಕೆ ಒಳಗಾಗುವಂತಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋವಿಡ್ ಹೆಸರು ಕೇಳಿದರೆ ಪಟ್ಟಣದ ಜನ ಬೆಚ್ಚಿ ಬೀಳುತ್ತಿದ್ದಾರೆ. ಇಂತಹ ಸನ್ನಿವೇಶವನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು ಕೋವಿಡ್ ಬಗ್ಗೆ ಗಾಳಿಸುದ್ದಿ ಹರಿಯಬಿಡುತ್ತಿದ್ದಾರೆ. ಆಲ್ದೂರಿನ ಮೇದರ ಬೀದಿ, ಹಾಗೂ ಸಂತೆ ಮೈದಾನದಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಕಂಡುಬಂದಿದೆ ಎಂಬ ಸುದ್ದಿ ಪಟ್ಟಣದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಚರ್ಚೆಯ ವಿಷಯವಾಗಿತ್ತು. ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಆಯಾ ಪ್ರದೇಶಗಳನ್ನು ಸೀಲ್‌ ಡೌನ್‌ ಮಾಡಿಸುತ್ತದೆ. ಆಲ್ದೂರಿನ ಸಂತೆ ಮೈದಾನಕ್ಕೆ ಕಾಸರಗೋಡಿನಿಂದ ಮಹಿಳೆಯೊಬ್ಬರು ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಪಟ್ಟಣದ ಕೆಲವರು ಈ ವಿಚಾರವನ್ನು ಕೋವಿಡ್ ಪಾಸಿಟಿವ್‌ ಬಂದಿದೆ ಎಂದು ತಪ್ಪಾಗಿ ತಿಳಿದುಕೊಂಡು ಸುಮ್ಮನೆ ಸುದ್ದಿ ಹರಡುತ್ತಿದ್ದು, ಇಂತಹ ಪ್ರಕರಣಗಳು ವರದಿಯಾಗಿಲ್ಲ.

ವದಂತಿಗಳಿಗೆ ಕಿವಿಗೊಡಬೇಡಿ: ಕೋವಿಡ್ ಪಾಸಿಟಿವ್‌ ಪ್ರಕರಣಗಳು ಕಂಡುಬಂದರೆ 1 ಗಂಟೆಯೊಳಗೆ ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್‌ ಮಾಡಲಾಗುತ್ತದೆ. ಪ್ರಕರಣಗಳು ಕಂಡು ಬಂದಲ್ಲಿ ಹೆಲ್ತ್‌ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಕೋವಿಡ್ ವೈರಸ್‌ ಬಗ್ಗೆ ವದಂತಿಗಳಿಗೆ ಜನ ಕಿವಿಗೊಡಬಾರದು ಎಂದು ಆಲ್ದೂರು ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಚಾಲುಕ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next