Advertisement

ಅಂತೂ ಬಂತು ಸರ್ಕಾರಿ ಬಸ್‌!

01:07 PM Mar 19, 2020 | Naveen |

ಆಲ್ದೂರು: ಚಿಕ್ಕಮಗಳೂರು ಜಿಲ್ಲೆಯ ಸಿರವಾಸೆ, ಬೊಗಸೆ, ಕಡವಂತಿ, ಕಡಬಗೆರೆ ಗ್ರಾಮಗಳಿಗೆ ಸುಮಾರು 70 ವರ್ಷಗಳ ನಂತರ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪ್ರಾರಂಭವಾಗಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯಿಂದ ಕೇವಲ 35 ಕಿ.ಮೀ. ದೂರದಲ್ಲಿರುವ ಸಿರವಾಸೆ, ಬೊಗಸೆ, ಕಡವಂತಿ, ಕಡಬಗೆರೆ ಗ್ರಾಮಗಳು ಕಳೆದ 70ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಹಲವು ವರ್ಷಗಳ ನಂತರ ಬಸ್‌ ಸಂಚಾರ ಆರಂಭವಾಗಿರುವುದರಿಂದ ಇಲ್ಲಿನ ಜನರ ಬಹು ವರ್ಷಗಳ ಕನಸು ನನಸಾಗಿದೆ.

ಸ್ವಾತಂತ್ರ್ಯ ದೊರೆತ ದಿನದಿಂದಲೂ ಈ ಗ್ರಾಮಗಳಿಗೆ ಸಹಕಾರಿ ಸಾರಿಗೆ ಸೌಲಭ್ಯ ಬಿಟ್ಟರೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಮರೀಚಿಕೆಯಾಗಿತ್ತು. ಕಿರಿದಾದ ರಸ್ತೆಗಳು, ಕಡಿದಾದ ತಿರುವುಗಳು, ಅಭಿವೃದ್ಧಿ ಕಾಣದ ರಸ್ತೆಗಳಿಂದಾಗಿ ಈ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಕನಸಾಗಿತ್ತು. ಸಮಯಕ್ಕೆ ಸರಿಯಾಗಿ ಬಸ್‌ ಸೌಕರ್ಯವಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಪಟ್ಟಣ ತಲುಪಲು ಹರಸಾಹಸ ಪಡಬೇಕಿತ್ತು. ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು. ಇತ್ತೀಚೆಗೆ ಸಹಕಾರ ಸಾರಿಗೆ ಬಸ್‌ಗಳ ಮುಷ್ಕರದಿಂದಾಗಿ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳು ನಿಲುಗಡೆಯಾದ ಕಾರಣ ಜನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು.

ಈ ಸಮಸ್ಯೆಯನ್ನು ಮನಗಂಡ ಅಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು ಗ್ರಾಮಸ್ಥರ ಜೊತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತುರ್ತಾಗಿ ಈ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಚಿಕ್ಕಮಗಳೂರಿನಿಂದ ಕೇವಲ 35 ಕಿ.ಮೀ. ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಸಮರ್ಪಕವಾದ ಬಸ್‌ ಸಂಚಾರ ಇರಲಿಲ್ಲ. ಈ ಭಾಗದ ಜಿಪಂ ಸದಸ್ಯೆ ಕವಿತಾ ಲಿಂಗರಾಜು ಅವರು ನಮ್ಮ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ತರಲು ಶ್ರಮಿಸಿದ್ದಾರೆ. ಇದರಿಂದಾಗಿ ಇಲ್ಲಿನ ವಾಸಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್‌ ಕಲ್ಪಿಸಿದರೆ ಅನುಕೂಲವಾಗುತ್ತದೆ.
ವಿನೋದ್‌, ಸ್ಥಳೀಯರು

Advertisement

ಸಿರವಾಸೆ, ಬೊಗಸೆ ಹಾಗೂ ಸುತ್ತಲಿನ ಗ್ರಾಮಗಳ ಜನರು ಬಸ್‌ ಸೌಕರ್ಯವಿಲ್ಲದೆ ಪರದಾಡುತ್ತಿದ್ದರು. ಸಹಕಾರ ಸಾರಿಗೆ ಬಸ್‌ ಮುಷ್ಕರದಿಂದಾಗಿ ಜನ ಸಂಚಾರಕ್ಕೆ ತೊಂದರೆಯಾಗಿತ್ತು. ಕೆಎಸ್‌ ಆರ್‌ಟಿಸಿ ಬಸ್‌ಗಾಗಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿನ ಜನ
ಕಾಯುತ್ತಿದ್ದರು. ಬಸ್‌ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆ. ನಮ್ಮ ಮನವಿಗೆ ಸ್ಪಂದಿಸಿ ಕೆಎಸ್‌ ಆರ್‌ಟಿಸಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೊದಲ ದಿನ ಕೆಎಸ್‌ಆರ್‌ಟಿಸಿ ದೊಡ್ಡ ಬಸ್‌ ಸಂಚಾರ ಮಾಡಿತು. ಆದರೆ, ಕಡಿದಾದ ತಿರುವುಗಳಲ್ಲಿ ಬಸ್‌ ಚಾಲನೆ ಕಷ್ಟವಾಯಿತು. ನಂತರ ಮಿನಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.
ಕವಿತಾ ಲಿಂಗರಾಜು
ಜಿಪಂ ಸದಸ್ಯೆ, ಖಾಂಡ್ಯ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next