Advertisement

ನಿವೇಶನ ಹಂಚಿಕೆಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ

07:38 PM Nov 04, 2019 | Naveen |

ಆಲ್ದೂರು: ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಕರವೇ ಆಲ್ದೂರು ಹೋಬಳಿ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್‌ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

Advertisement

ಬಸ್‌ ನಿಲ್ದಾಣದ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್‌ ಮಾತನಾಡಿ, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವ ಈ ಪ್ರದೇಶದಲ್ಲಿ ಅವರ ವಾಸಕ್ಕೆ ಯೋಗ್ಯ ಮನೆಯಿಲ್ಲ, ಮನೆ ಕಟ್ಟಿಕೊಳ್ಳಲು ನಿವೇಶನವಿಲ್ಲ. ಸರ್ಕಾರ ಸರ್ವರಿಗೂ ಸಮಪಾಲು ಸಮಬಾಳು ಎಂದು ಹೇಳುವುದು ಬಾಯಿ ಮಾತಲ್ಲಿ ಉಳಿದು ಹೋಗಿದೆ. ಎಲ್ಲರಿಗೂ ಬಾಳು ಕಟ್ಟಿಕೊಡುತ್ತೇವೆ ಎಂದು ಹೇಳುವುದು ಬರಿ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 25 ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಆದರೂ ಸಹ ನಿವೇಶನ ಹಂಚಿಕೆಯಾಗಿಲ್ಲ. ಇಲ್ಲಿ ನಿವೇಶನಕ್ಕೆ ಕೊರತೆಯಿಲ್ಲ. ನೂರಾರು ಗೋಮಾಳಗಳಿವೆ. ಸಾವಿರಾರು ಎಕರೆ ಭೂಮಿ ಶ್ರೀಮಂತರ ಪಾಲಾಗಿದೆ. ಅರಣ್ಯ ಭೂಮಿಯಿದೆ. ಆದರೆ ಬಡವರಿಗೆ ನಿವೇಶನ ಹಂಚುವಲ್ಲಿ ಗ್ರಾಪಂ ಸಂಪೂರ್ಣವಾಗಿ ವಿಫಲವಾಗಿದೆ. ಕೂಡಲೇ ನಿವೇಶನ ರಹಿತರ ಪಟ್ಟಿ ಮಾಡಿ ಗ್ರಾಪಂ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಸರ್ಕಾರಿ ಕಿರಿಯ ಆಸ್ಪತ್ರೆಯಿದ್ದು, ಇಲ್ಲಿ ವೈದ್ಯರಿದ್ದರೂ ಸಹ ಸಿಬ್ಬಂದಿ ಕೊರತೆಯಿದೆ. ಪ್ರಯೋಗಾಲಯ ಇದ್ದರೂ ಕೂಡ ಇದಕ್ಕೆ ಸಿಬ್ಬಂದಿ ಕೊರತೆಯಿಂದ ಪ್ರಯೋಗಾಲಯಕ್ಕೆ ಬೀಗ ಹಾಕಲಾಗಿದೆ. ಔಷಧಿಗಳ ಕೊರತೆ ಎದುರಿಸುತ್ತಿದೆ. ಹೆಸರಿಗೆ ಮಾತ್ರ ನಿರ್ಮಲ ಗ್ರಾಪಂ ಆದರೆ ನೈರ್ಮಲ್ಯ ಮರೀಚಿಕೆಯಾಗಿದೆ ಎಂದು ದೂರಿದರು.

ಕಸ ಕಡ್ಡಿಗಳಿಂದ ತುಂಬಿ ತುಳುಕುತ್ತಿದೆ ಪಟ್ಟಣ. ಕಸ ಸಮರ್ಪಕವಾಗಿ ವಿಲೇವಾರಿಯಾಗದೆ ಸೊಳ್ಳೆಗಳ ತಾಣವಾಗಿದ್ದು, ಡೆಂಘೀ, ಮಲೇರಿಯಾದಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನರಿಂದ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ ಅದರಿಂದ ಪಟ್ಟಣ ಮಾತ್ರ ಸ್ವಚ್ಛವಾಗುತ್ತಿಲ್ಲ. ಸ್ವಚ್ಛತೆಯಲ್ಲಿ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ಸರಿ ಪಡಿಸಬೇಕು ಎಂದು ಆಗ್ರಹಿಸಿದರು. ಪ್ಲಾಸ್ಟಿಕ್‌ ಮುಕ್ತ ಪಟ್ಟಣವನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.

Advertisement

ಕರವೇ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್‌ ಆಲಿ ಮಾತನಾಡಿ, ಅಂಗಡಿಗಳ ಮುಂಗಟ್ಟು ಮುಂದೆ ಇರುವ ಕಸ ವಿಲೇವಾರಿಯಾಗುತ್ತಿದೆ. ಆದರೆ ಮನೆಗಳ
ಕಸ ವಿಲೇವಾರಿ ಮಾಡಲು ಟ್ರಾÂಕ್ಟರ್‌ಗಳು ಮನೆ ಹತ್ತಿರ ಬರುತ್ತಿಲ್ಲ. ಎಲ್ಲರೂ ಮನೆ ಕಂದಾಯ ಕಟ್ಟುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಪಟ್ಟಣ ಸ್ವತ್ಛತೆಯಿಂದ ಕೂಡಿರಲು ಹೇಗೆ ಸಾಧ್ಯ. ಮಲೆನಾಡು ಭಾಗದಲ್ಲೇ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಸಾಕಷ್ಟು ಸಣ್ಣ ಪಂಚಾಯತಿಗಳು ಮಾದರಿ ಗ್ರಾಪಂಗಳಾಗಿದ್ದು, ಆಲ್ದೂರು ಗ್ರಾಪಂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಸ್ವಚ್ಛತೆಯಲ್ಲಿ ಗ್ರಾಪಂ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಿಂದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಘೋಷಣೆಗಳೊಂದಿಗೆ ಸಾಗಿ ಗ್ರಾಪಂಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಲಾ ರವಿ, ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ಉಪಾಧ್ಯಕ್ಷ ಶ್ರೀಧರ್‌, ರವೀಂದ್ರ, ಕಾರ್ಯದರ್ಶಿಗಳಾದ ಸಂಶುದ್ದೀನ್‌, ವಸಂತ್‌, ತಾಲೂಕು ಉಪಾಧ್ಯಕ್ಷ ಮದನ್‌, ಕೃಪಾಕ್ಷ ಕೋಟ್ಯಾನ್‌, ಚೇತನ್‌,
ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next