ಆಲ್ದೂರು: ಪಟ್ಟಣ ಸಮೀಪದ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಸುಸಜ್ಜಿತವಾದ ಕಟ್ಟಡ ಇಲ್ಲದೇ ಇಲ್ಲಿನ ಬಸ್ ನಿಲ್ದಾಣವೇ ಗ್ರಾಮಸ್ಥರ ಪಾಲಿಗೆ ವಾಚನಾಲಯವಾಗಿದೆ.
ಬಸ್ ನಿಲ್ದಾಣದಲ್ಲಿಯೇ ಇರುವ ಕಿಷ್ಕಿಂದೆಯಂತಹ ಪುಟ್ಟ ಕೊಠಡಿಯಲ್ಲಿ ಗ್ರಂಥಾಲಯ ನಡೆಸಲಾಗುತ್ತಿದೆ. ಮೇಲ್ಚಾವಣಿ ಶೀಟುಗಳು ಒಡೆದು ಹೋಗಿ, ಮಳೆ ಬಂದಾಗ ಸೋರುತ್ತಿದೆ. ಸುಣ್ಣ-
ಬಣ್ಣ ಕಂಡು ಹಲವು ವರ್ಷಗಳೇ ಕಳೆದಿವೆ. ಕೊಠಡಿ ಬಾಗಿಲು ಹಾಳಾಗಿವೆ. ಈ ಗ್ರಂಥಾಲಯವನ್ನು ಪ್ರಾರಂಭಿಸಿ 13 ವರ್ಷ ಕಳೆದಿದ್ದು, ಇಲ್ಲಿಯವರೆಗೂ ಅದು ಕಾಯಕಲ್ಪವನ್ನೇ ಕಂಡಿಲ್ಲ. ಗ್ರಂಥಾಲಯದಲ್ಲಿ ಚಿಕ್ಕದೊಂದು ಮುರುಕಲು ಬೀರು ಬಿಟ್ಟರೆ ಬೇರೆ ಯಾವುದೇ ರ್ಯಾಕ್‌ಗಳಿಲ್ಲದ ಕಾರಣ ಉತ್ತಮ ಪುಸ್ತಕಗಳನ್ನು ಟೇಬಲ್ ಮೇಲೆಯೇ ಜೋಡಿಸಿಡಲಾಗಿದೆ.
ಗ್ರಂಥಾಲಯದ ಮೇಲ್ವಿಚಾರಿಕಿ ಒಂದು ಟೇಬಲ್ ಹಾಕಿಕೊಂಡು ಕುಳಿತುಕೊಂಡರೆ ಉಳಿದ ಸ್ವಲ್ಪ ಜಾಗದಲ್ಲೇ 1 ಚೇರು ಹಾಕಿ ಬಂದವರು ಕೂರಲು ಜಾಗ ಮಾಡಲಾಗಿದೆ. 2-3 ಜನ ಒಟ್ಟಿಗೆ ಬಂದರೆ ಒಬ್ಬರ ನಂತರ ಒಬ್ಬರು ಪಡಿತರ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲುವಂತೆ ಪುಸ್ತಕ ಓದಲು ಹೊರಗೆ ಕಾಯುತ್ತ ನಿಲ್ಲಬೇಕು. ಇಲ್ಲವೇ ಬಸ್ ನಿಲ್ದಾಣದ ಕಟ್ಟೆಯನ್ನು ಆಶ್ರಯಿಸಬೇಕು. ಪುಸ್ತಕ ಓದಲು ಬರುವ ಜನರು ಒಲ್ಲದ ಮನಸ್ಸಿನಿಂದಲೇ ಪುಸ್ತಕಗಳನ್ನು ಓದುವಂತಹ ಸ್ಥಿತಿ ಇದೆ.
ಗ್ರಂಥಪಾಲಕರಿಗೆ ಕನಿಷ್ಟ ವೇತನವನ್ನು ನೀಡಬೇಕೆಂದು ಸರ್ಕಾರ ಆದೇಶ ಜಾರಿ ಮಾಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗ ನೀಡುತ್ತಿರುವ ಗೌರವಧನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ದೊಡ್ಡಮಾಗರವಳ್ಳಿ ಗ್ರಂಥಾಲಯದ ಗ್ರಂಥಪಾಲಕಿ ತಮ್ಮ ಸಮಸ್ಯೆಯನ್ನು ತೆರೆದಿಟ್ಟರು.
ಪ್ರಸ್ತುತ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುವವರು ಬಹಳ ವಿರಳ. ಯುವ ಪೀಳಿಗೆಯಂತೂ ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್ ಗಳಲ್ಲಿ ಮುಳುಗಿಹೋಗಿದ್ದು, ಸದಭಿರುಚಿಯ ಪುಸ್ತಕಗಳನ್ನು ಓದುವಷ್ಟು ತಾಳ್ಮೆ ಅವರಲ್ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇರುವ ಗ್ರಂಥಾಲಯಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು, ಸಣ್ಣಪುಟ್ಟ ಕೊಠಡಿಗಳಲ್ಲಿ ಗ್ರಂಥಾಲಯಗಳನ್ನು ನಡೆಸುವ ಅನಿವಾರ್ಯತೆ ಇದೆ ಎಂಬುದು ದೊಡ್ಡಮಾಗರವಳ್ಳಿ ಗ್ರಾಮದ ಸಾಹಿತಿ ಡಿ.ಬಿ.ಈಶ್ವರ್ ಅವರ ಅಭಿಮತವಾಗಿದೆ.