Advertisement
ಪಿತ್ರೋಡಿ ನಿವಾಸಿ ದಯಾನಂದ ಸಾಲ್ಯಾನ್ (40) ಮೃತರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೊಲೆ ಆರೋಪಿ ಭರತ್ (40)ನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಉದ್ಯಾವರ ಪಿತ್ರೋಡಿ ಹಳೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಬಾರ್‌ವೊಂದರಲ್ಲಿ ಕುಡಿದ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದ್ದು, ಬಾರ್‌ನಿಂದ ಹೊರಗಡೆ ಬಂದ ದಯಾನಂದ ಮತ್ತು ಭರತ್ ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಭರತ್ ತನ್ನ ಕೈ ಬೆರಳಿನಲ್ಲಿದ್ದ ಕಬ್ಬಿಣದ ಪಂಚ್‌ನಿಂದ ದಯಾನಂದನ ಮುಖ ಹಾಗೂ ಕೆನ್ನೆಯ ಭಾಗಕ್ಕೆ ಬಲವಾಗಿ ಜಜ್ಜಿ ಬಳಿಕ ತಲೆಗೆ ಹೊಡೆದಿದ್ದ. ದತ್ತಾತ್ರೇಯ ಭಜನ ಮಂದಿರದಲ್ಲಿ ಭಜನ ಮಂಗಳ ನಡೆಯುತ್ತಿದ್ದು, ಇಲ್ಲಿಯೇ ಸಮೀಪ ಕೊಲೆ ನಡೆದಿದೆ. ತೀವ್ರವಾಗಿ ಗಾಯಗೊಂಡ ದಯಾನಂದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಭರತ್ ಘಟನೆಯ ಅನಂತರ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರ ಸಹಕಾರದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Related Articles
ಆರೋಪಿ ಭರತ್ ಪಿತ್ರೋಡಿಯ ಫಿಶ್‌ಮಿಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆಯೂ ಹಲ್ಲೆ ಸಹಿತ ಹಲವಾರು ಪ್ರಕರಣಗಳು ದಾಖಲಾಗಿತ್ತು. ಗಾಂಜಾ ವ್ಯಸನಿಯಾಗಿದ್ದ ಈತ ಇದೇ ಮತ್ತಿನಲ್ಲಿ ಗಲಾಟೆ, ಹೊಡೆದಾಟದಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ. ಪಿತ್ರೋಡಿ ಭಾಗದಲ್ಲಿ ಗಾಂಜಾ ಚಟುವಟಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಬಗ್ಗೆ ಗ್ರಾಮಸಭೆಯಲ್ಲಿಯೂ ಹಲವಾರು ಬಾರಿ ಚರ್ಚೆ ನಡೆದಿತ್ತು. ಆದರೂ ಪೊಲೀಸರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಗಲಾಟೆಗಳು ಕೊಲೆಯ ಹಂತಕ್ಕೆ ತಲುಪುತ್ತಿವೆ. ಇನ್ನಾದರೂ ಈ ಭಾಗದಲ್ಲಿ ನಡೆಯುವ ಗಾಂಜಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Advertisement