Advertisement

ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಶಿಬಿರ; ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ  

04:09 PM Dec 01, 2022 | Team Udayavani |

ದೋಟಿಹಾಳ: ಹೆತ್ತವರನ್ನು ರಕ್ಷಣೆ ಮಾಡುವುದು ಮಕ್ಕಳ ಧರ್ಮ, ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಧರ್ಮ, ಭಕ್ತರ ರಕ್ಷಣೆ ಮಾಡುವುದು ಗುರುಗಳ ಧರ್ಮ, ಆದರೆ ಬಡವರ, ದೀನ ದಲಿತರ ಹಾಗೂ ಇಂತಹ ಕುಡುಕರನ್ನು ಸರಿದಾರಿಗೆ ತರುವ ಕೆಲಸ ಮಾಡುವುದಿದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಮಾತ್ರ ಸಾಧ್ಯ ಎಂದು ಕುಷ್ಟಗಿ ಮದ್ದಾನಿ ಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

Advertisement

ಗ್ರಾಮದ ಶಾಧಿ ಮಹಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಷ್ಟಗಿ ಹಾಗೂ ದೋಟಿಹಾಳ ವಲಯದಿಂದ ಆಯೋಜಿಸಿದ್ದ 1623ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ ಎಂದು ಅವರು ಆಶೀರ್ವಚನ ನೀಡಿದರು.

ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತನಾಡಿ, ಕುಡಿತದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಕೆ. ಶರಣಪ್ಪ ಮಾತನಾಡಿ, ಡಾ| ಡಿ. ವಿರೇಂದ್ರ ಹೆಗ್ಗಡೆ, ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಂತೆ ಮಾರ್ಗದರ್ಶನದ ಮದ್ಯವರ್ಜನ ಶಿಬಿರವು ಅನೇಕ ಜನರ ಜೀವನವನ್ನು ಉತ್ತಮ ಕೌಶಲ್ಯಯುತ ಜೀವನವನ್ನಾಗಿ ರೂಪಿಸಿದೆ. ಅವರ ಉತ್ತಮ ಕಾರ್ಯಗಳಿಂದ ಜನಜೀವನ ಸ್ವರ್ಗಸದೃಶವಾಗಿದೆ. ಮದ್ಯ ಮುಕ್ತರಿಗೆ ಸಮಾಜದಲ್ಲಿ ಒಂದು ಗೌರವವಿದೆ. ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ, ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ ಎಂದು ಹೇಳಿದರು.

ಈ ಮದ್ಯವರ್ಜನ ಶಿಬಿರದ ಅಧ್ಯಕ್ಷ ರಾಜೇಸಾಬ ಯಲಬುರ್ಗಿ ಮಾತನಾಡಿ, ಶಿಬಿರದ ಆರಂಭದಲ್ಲಿ ದುರ್ವರ್ತನೆ ತೋರಿದವರು ಶಿಬಿರದ ಅಂತ್ಯದಲ್ಲಿ ಪರಿವರ್ತನೆಯಾಗುವ ಮೂಲಕ ಇಡೀ ಕುಟುಂಬ ಪರಿವರ್ತನೆಯಾದ ಸಂತ್ರಪ್ತ ಭಾವನೆ ಎಲ್ಲರಲ್ಲೂ ಇದೆ ಎಂದು ಹೇಳಿದರು.

Advertisement

ಶಿಬಿರಾಧಿಕಾರಿ ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕುಡುಕನೆಂಬ ಒಂದೇ ಕಾರಣಕ್ಕೆ ನನ್ನ ಹೆಂಡತಿ ಮತ್ತು ಮಕ್ಕಳು ನನ್ನನ್ನು ತ್ಯಜಿಸಿ ತವರು ಸೇರಿದರು. ಕೈಯಲ್ಲಿ ಬಿಡಿಗಾಸು ಇಲ್ಲದ್ದಿದ್ದ ಸಂದರ್ಭ ಅವರಿವರಲ್ಲಿ ಕಾಡಿ ಬೇಡಿ ಹಣ ಪಡೆದು ಕುಡಿದು, ದಾರಿಯಲ್ಲಿ ಬಿದ್ದು ತಲೆಗೆಲ್ಲಾ ಪೆಟ್ಟು ಮಾಡಿಕ್ಕೊಂಡಿದ್ದೇನೆ ಎಂದು ಈ ಶಿಬಿರದಲ್ಲಿ ಭಾಗವಹಿಸಿದ 58 ಶಿಬಿರಾರ್ಥಿಗಳು ತಮ್ಮ ತಮ್ಮ ನೋವುಗಳನ್ನು ಹೇಳಿಕೊಂಡು, ಮದ್ಯವ್ಯಸನವನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿದ್ದಾರೆ. ಈ ಶಿಬಿರವು 8 ದಿನಗಳ ನಡೆದು ಇಂದು ಮುಕ್ತಾಯ ಕಂಡಿತು ಎಂದು ಹೇಳಿದರು.

ಇಲಕಲ್ ನಗರದ ಉಪನ್ಯಾಸಕ ಲಾಲಹುಸೇನ ಕಂದಗಲ್ ಅವರ ಕಾರ್ಯಕ್ರಮದ ಉಪನ್ಯಾಸ ನೀಡಿದರು. ಪ್ರಧಾನ ಸಂಚಾಲಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಶೇಖರ ನಾಯ್ಕ ಮಾತನಾಡಿದರು.

ಇದೇ ವೇಳೆ ಶಿಬಿರಾರ್ಥಿಗಳಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಲು ಕಾರಣೀಕರ್ತರಾದ ದಾನಿಗಳಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೇಸೂರ ಗ್ರಾ.ಪಂ. ಸದಸ್ಯ ಗೌಸುಸಾಬ ಕೊಣ್ಣೂರು, ಶುಕಮುನಿ ಈಳಗೇರ, ಮಾಜಿ ಗ್ರಾ.ಪಂ. ಅಧ್ಯಕ್ಷ ಶೇಖಪ್ಪ ದೊಡಮನಿ, ಶರಣಪ್ಪ ಗೋತಗಿ, ಮಹಾಂತಯ್ಯ, ರುದ್ರಪ್ಪ ಅಕ್ಕಿ, ಮಾದೇಸ್ವಾಮಿ, ಅನ್ನಪೂರ್ಣ ಪಾಟೀಲ್,  ಗ್ರಾಮದ ಮುಖಂಡರಾದ ಹನುಮಂತರಾವ್ ದೇಸಾಯಿ, ಬಾಳಪ್ಪ ಅರಳಿಕಟ್ಟಿ, ಶ್ಯಾಮೀದಸಾಬ ಮುಜಾವರ, ತಿಪ್ಪನಗೌಡ, ಕರಿಯಪ್ಪ ಪೂಜಾರಿ, ರಾಜೇಸಾಬ ತಾಸೇಧ, ಶ್ರೀನಿವಾಸ ಕಂಟ್ಲಿ, ಪ್ರೌಢಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಈರಪ್ಪ ಬಳಿಗಾರ, ದೋಟಿಹಾಳ ವಲಯದ ಮೇಲ್ವಿಚಾರಕ ಮಂಜುನಾಥ, ಸಂಘದ ಪದಾಧಿಕಾರಿಗಳು, ಸ್ವಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಶಿಬಿರಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next