ಕೆ.ಆರ್.ಪುರ: ಸಮರ್ಪಕ ನಿರ್ವಹಣೆ ಇಲ್ಲದೆ ರಾಮಮೂರ್ತಿ ನಗರ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸಮುದಾಯ ಭವನ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಮದುವೆ ಸೇರಿದಂತೆ ಬಡ ವರ್ಗದವರು ಸಮಾಂಭ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ್ದ ಸಮುದಾಯ ಭವನ ಉಪಯೋಗಕ್ಕೆ ಯೋಗ್ಯವಿಲ್ಲದಂತಾಗಿದೆ. ಸಮುದಾಯ ಭವನದ ವೇದಿಕೆ ಸೇರಿದಂತೆ ಎಲ್ಲೆಡೆ ಮದ್ಯದ ಬಾಟಲಿಗಳು, ಕಸ ಬಿದ್ದಿದ್ದು, ಗಿಡಗಂಟೆಗಳು ಬೆಳೆದಿವೆ.
17 ವರ್ಷದ ಹಿಂದೆ ಆಗಿನ ಶಾಸಕ ಎ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಗರಸಭೆ ಅನುದಾನದಲ್ಲಿ ಸಮುದಾದಯ ಭವನ ನಿರ್ಮಾಣ ಮಾಡಲಾಗಿತ್ತು. 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಭವನ, ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ.
ಕಟ್ಟಡದ ಆವರಣದಲ್ಲಿ ಸಾರ್ವಜನಿಕರು ತ್ಯಾಜ್ಯ ತಂದು ಸುರಿಯುತ್ತಾರೆ. ರಾತ್ರಿಯಾದರೆ ಕುಡುಕರು ಸೇರಿಕೊಂಡು ಮದ್ಯ ಸೇವಿಸುತ್ತಾರೆ. ಇದನ್ನು ಪ್ರಶ್ನಿಸುವ, ಇಲ್ಲವೇ ತಿಳಿ ಹೇಳಲು ಹೋಗುವ ಸ್ಥಳೀಯರಿಗೆ ಅವಾಚ್ಯವಾಗಿ ಬೈದು, ಗಲಾಟೆ ಮಾಡುತ್ತಾರೆ.
ಸಮುದಾಯ ಭವನದ ಸುತ್ತಮುತ್ತ ನೂರಾರು ಕುಟುಂಬಗಳು ವಾಸ ಮಾಡುತ್ತಿದ್ದು, ಪುಂಡರ ಹಾವಳಿ ಮಿತಿ ಮೀರಿದೆ. ಹೆಣ್ಣು ಮಕ್ಕಳು ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಷ್ಟೆಲ್ಲಾ ಆಧರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕುಡುಕರ ಕಾಟಕ್ಕೆ ಹೆದರಿ ರಾತ್ರಿ ವೇಳೆ ಮನೆಯಿಂದ ಆಚೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯ ನಿವಾಸಿ ರಾಮಚಂದ್ರ ಅಳಲು.
ರಾತ್ರಿ ಹೊತ್ತು ಕುಡಿದು, ಮೋಜು-ಮಸ್ತಿ ಮಾಡುವ ಪುಂಡರು, ಅಮಲಿನಲ್ಲಿ ಸಮುದಾಯದ ಭವನದ ಗೇಟು ಮುರಿದು ಹಾಕಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ದೂರು ಕೊಟ್ಟಿದ್ದು, ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಮಂಜುಳಾ ಆರೋಪಿಸಿದ್ದಾರೆ.
* ಕೆ.ಆರ್.ಗಿರೀಶ್