ಮದ್ಯದ ಹೊಳೆ ಹರಿಯಬೇಕು ಎನ್ನುವ ಕಲ್ಪನೆ ಬಹುತೇಕ ಪಾನಪ್ರಿಯರದು. ಅಮೆರಿಕದ ಬಾಸ್ಟನ್ ನಗರದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿತ್ತು. 1919ರ ಜನವರಿ 15ರಂದು ಅಂಥದ್ದೊಂದು ಘಟನೆಗೆ ನಗರ ಸಾಕ್ಷಿಯಾಗಿತ್ತು. ಹೇಳಬೇಕೆಂದರೆ ಅಂದು ಮದ್ಯದ ಹೊಳೆಯಲ್ಲ ಸುನಾಮಿಯೇ ಎದ್ದಿತ್ತು. ಮದ್ಯ ತಯಾರಿಕಾ ಘಟಕದಲ್ಲಿ 90 ಅಡಿ ಎತ್ತರದ ಬೃಹತ್ ಉಕ್ಕಿನ ಟ್ಯಾಂಕ್ ಒಂದಿತ್ತು. ಅದರಲ್ಲಿ 25 ಲಕ್ಷ ಗ್ಯಾಲನ್‌ಗಳಷ್ಟು ಪ್ರಮಾಣದ ರಮ್ ತಯಾರಿಕೆಗೆ ಬಳಸುವ ದ್ರವವನ್ನು ತುಂಬಿಸಿದ್ದರು. ತಾಪಮಾನದಲ್ಲಿನ ವ್ಯತ್ಯಯ ಮತ್ತು ರಾಸಾಯನಿಕ ರಿಯಾಕ್ಷನ್‌ನಿಂದಾಗಿ ಟ್ಯಾಂಕ್ ಒಡೆದು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿತ್ತು. ಟ್ಯಾಂಕನ್ನು ನೆಲಮಟ್ಟದಿಂದ 50 ಅಡಿ ಎತ್ತರದಲ್ಲಿ ನಿಲ್ಲಿಸಲಾಗಿತ್ತು. ಟ್ಯಾಂಕ್ ಒಡೆದಾಗ ಅಷ್ಟೂ ಪ್ರಮಾಣದ ಮದ್ಯದ ದ್ರವ ರಸ್ತೆಗೆ ನುಗ್ಗಿತ್ತು. ಸುಮಾರು 15 ಅಡಿಗಳಷ್ಟು ಎತ್ತರದ ಅಲೆ ಎದ್ದಿದ್ದವು. ರಸ್ತೆಯಿಂದ ಮನೆಗಳಿಗೆ, ಅಂಗಡಿಗಳಿಗೆ ನುಗ್ಗಿ ರಾದ್ಧಾಂತವೇ ಸೃಷ್ಟಿಯಾಗಿತ್ತು. ವಾಹನಗಳು, ಕುದುರೆ ಗಾಡಿಗಳು ಆ ಮದ್ಯದ ಹೊಳೆಯಲ್ಲಿ ಮಿಂದೆದ್ದವು. ಪ್ರಾಣಹಾನಿಗೂ ಇದು ಕಾರಣವಾಗಿತ್ತು ಎಂದರೆ ಘಟನೆಯ ಗಂಭೀರತೆಯ ಅರಿವಾಗುತ್ತದೆ. ಸುತ್ತಮುತ್ತಲ ಪ್ರದೇಶವನ್ನು ಸ್ವತ್ಛ ಮಾಡಲು ವಾರಗಟ್ಟಲೆ ಬೇಕಾಯಿತು. ಘಟನೆ ನಡೆದ ದಶಕಗಳ ನಂತರವೂ ವಾಸನೆ ಉಳಿದೇ ಇತ್ತು ಎಂದು ಸ್ಥಳೀಯರು ನೆನಪಿಸಿಕೊಂಡಿದ್ದರು.
ಹವನ