ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿಯನ್ನು ಮದ್ಯಪಾನ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸುವಂತೆ ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.
ಗ್ರಾಮದ ದಿನಸಿ, ಕಿರಾಣಿ ವ್ಯಾಪಾರಸ್ಥರ ಸಭೆ ನಡೆಸಿ ಇನ್ನು ಮುಂದೆ ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕೊಡದಂತೆ, ಒಂದು ವೇಳೆ ಜಾಗ ಕೊಟ್ಟಲ್ಲಿ ಕಾನೂನು ಕ್ರಮದ ಜೊತೆಗೆ ಅಂಗಡಿಯವರಿಗೇ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಇತ್ತೀಚಿಗೆ ಗ್ರಾಮದ ಎಲ್ಲೆಂದರಲ್ಲಿ ಸಾರಾಯಿ, ಮದ್ಯದ ಪ್ಯಾಕೆಟ್ ಎಸೆದು ಪರಿಸರ ಹಾಳುಗೆಡವಿದ್ದರಿಂದ ಗ್ರಾಮದ ಮುಖಂಡರು ಈ ತೀರ್ಮಾನಕ್ಕೆ ಬರಲು ಕಾರಣವಾಯಿತು. ಈ ಘಟನೆಯಿಂದ ಬೇಸತ್ತ ಮುಖಂಡರು ಮದ್ಯಮುಕ್ತ ಗ್ರಾಮ ಸಂಕಲ್ಪ ತೊಟ್ಟಿರುವುದು ಗ್ರಾಮದ ಯುವ ಜನತೆಗೂ ಪ್ರೇರಣೆ ನೀಡಿದಂತಾಗಿದೆ. ಸಾರಾಯಿ ಜೀವಕ್ಕೆ ಮಾರಕವಾಗಿದೆ. ಅದರ ಸೇವನೆಯಿಂದ ಗ್ರಾಮದ ಸೌಹಾರ್ದ ಸ್ಥಿತಿ ಹದಗೆಡುತ್ತದೆ. ಇದರಿಂದ ಮಕ್ಕಳು, ಯುವಕರು ಹಾಳಾಗುತ್ತಿದ್ದಾರೆ. ದುಡಿಯುವ ವರ್ಗದವರೂ ಇದಕ್ಕೆ ಬಲಿಯಾಗುತ್ತಿರುವುದು ವಿಷಾದ. ಇನ್ನು ಮುಂದೆ ಯಾರೂ ಸಾರಾಯಿ ಸೇವನೆ ಮಾಡಬಾರದು ಮತ್ತು ಸೇವಿಸಲು, ಮಾರಾಟ ಮಾಡಲು ಪ್ರಚೋದಿಸಬಾರದು ಎನ್ನುವ ಎಚ್ಚರಿಕೆ ಸಂದೇಶ ಮುಖಂಡರು ರವಾನಿಸಿದರು.
ಹಿರಿಯರಾದ ಚಂದಾಲಿಂಗ ಹಂಡರಗಲ್ಲ, ಮಾಳಪ್ಪ ಬಳಬಟ್ಟಿ, ಸಂಗಮೇಶ್ವರ, ಸಿದ್ದು, ತಿಪ್ಪಣ್ಣ ಪೂಜಾರಿ, ಗ್ರಾಪಂ ಸದಸ್ಯರಾದ ಹಣಮಂತ ಹಂಡರಗಲ್, ಮಲ್ಲಿಕಾರ್ಜುನ ಮಠ, ಮಲ್ಲಿಕಾರ್ಜುನ, ಎಸ್‌ಡಿಎಂಸಿ ಅಧ್ಯಕ್ಷ ಬಸಲಿಂಗಪ್ಪ ಮೇಟಿ, ದಲಿತ ಮುಖಂಡರು ಸೇರಿದಂತೆ ಹಲವರು ಮನವೊಲಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.