ಬಂಗಾರಪೇಟೆ: ಪ್ರತಿ ದಿನ ಮದ್ಯ ಸೇವನೆ ಮಾಡಲು ಸರ್ಕಾರಿ ಕಚೇರಿಯನ್ನೇ ಅಧಿಕಾರಿಗಳು ಅಡ್ಡೆಯನ್ನಾಗಿ ಮಾಡಿಕೊಂಡಿರುವ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಊಟದ ಪಕ್ಕದಲ್ಲೇ ಮದ್ಯದ ಬಾಟಲ್: ಮೀನುಗಾರಿಕೆ ಇಲಾಖೆ ವಿಭಾಗೀಯ ಉಪನಿರ್ದೇಶಕ ಮಹೇಶ್, ಹಿರಿಯ ಸಹಾಯಕ ನಿರ್ದೇಶಕ ಪೆದ್ದಣ್ಣ ಹಾಗೂ ಬೂದಿಕೋಟೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಮದ್ಯ ಸೇವನೆ ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ನಡೆ ಸ್ಥಳೀಯರಿಗೆ ಅಸಹ್ಯ ಹುಟ್ಟಿಸಿದ್ದು ಊಟ ಮಾಡುವ ಪಕ್ಕದಲ್ಲಿಯೇ ಮದ್ಯಸೇವನೆ ಮಾಡಿರುವ ಖಾಲಿ ಬಾಟಲ್ಗಳೂ ರಾರಾಜಿಸುತ್ತಿವೆ.
10 ಮಂದಿ ಸಿಬ್ಬಂದಿ ನೇಮಕ: ತಾಲೂಕಿನ ಮಾಲೂರು ಗಡಿಭಾಗದ ಮಾರ್ಕಂಡೇಯ ಡ್ಯಾಂ ಬಳಿ ಸರ್ಕಾರ ಮೀನು ಮರಿ ಸಾಕಾಣಿಕೆ ಕೇಂದ್ರ ಆರಂಭಿಸಿದೆ. ಡ್ಯಾಂ ಬಳಿ ಮೀನು ಮರಿ ಸಾಕಾಣಿಕೆ ಕೇಂದ್ರ ಸ್ಥಾಪಿಸಿ ಸಹಾಯಕ ನಿರ್ದೇಶಕರ ಹುದ್ದೆ ಸೇರಿದಂತೆ ಸುಮಾರು 10 ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ದೊಡ್ಡ ಮೀನುಗಳ ಸಾಗಣೆ: ಕಳೆದ 10 ವರ್ಷಗಳಿಂದ ಬರ ಇರುವುದರಿಂದ ನೀರಿಲ್ಲದೇ ಮೀನು ಮರಿ ಸಾಕಾಣಿಕೆಯನ್ನು ಕಡಿಮೆ ಮಾಡಲಾಗಿದೆ. ಡ್ಯಾಂನಲ್ಲಿರುವ ನೀರನ್ನು ಪಂಪ್ ಮೋಟಾರ್ ಮೂಲಕ ನೀರು ಹಾಯಿಸಿ ಸುಮಾರು 10 ತೊಟ್ಟಿಗಳಲ್ಲಿ ಮೀನು ಮರಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಿಬ್ಬಂದಿ ದೊಡ್ಡ ಮೀನುಗಳನ್ನೂ ಸಾಕಾಣಿಕೆ ಮಾಡಿ ಪಾರ್ಟಿಗಳಿಗೆ ಉಪಯೋಗಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
Advertisement
ತಾಲೂಕಿನ ಮಾರ್ಕಂಡೇಯ ಡ್ಯಾಂ ಬಳಿಯ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ನಿತ್ಯ ಅಧಿಕಾರಿಗಳು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.
Related Articles
Advertisement
ಸಿಬ್ಬಂದಿ ಮೇಲೆ ಒತ್ತಡ: ವಿಭಾಗೀಯ ಮೀನುಗಾರಿಕೆ ಉಪನಿರ್ದೇಶಕ ಮಹೇಶ್ ಕೋಲಾರ ಜಿಲ್ಲೆಯ ಮೀನುಗಾರಿಕೆ ಇಲಾಖೆ ಕೇಂದ್ರಗಳ ಮೇಲೆ ಪರಿಶೀಲನೆ ಮಾಡುವ ಉದ್ದೇಶದಿಂದ ಮದ್ಯದ ಪಾರ್ಟಿ ಆಯೋಜಿಸಲು ಅಧಿಕಾರಿ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಬೇಸತ್ತ ಸಿಬ್ಬಂದಿಯಿಂದ ವಿಡಿಯೋ:ಇದರಿಂದ ಬೇಸತ್ತ ಸಿಬ್ಬಂದಿಯೊಬ್ಬರು ಇವರ ಜೊತೆಯಲ್ಲಿದ್ದುಕೊಂಡು ಗುಂಡು-ತುಂಡು ಪಾರ್ಟಿಯನ್ನು ವಿಡಿಯೋ ಮಾಡಿದ್ದು ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ಬೂದಿಕೋಟೆ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಪಾರ್ಟಿ ಮಾಡಿಲ್ಲ. ಮೀನುಗಾರಿಕೆ ಕ್ವಾಟ್ರಸ್‌ನಲ್ಲಿ ನಮ್ಮ ಇಲಾಖೆ ಮೀನುಗಾರಿಕೆ ಉಪನಿರ್ದೇಶಕ ಮಹೇಶ್ ಬಂದಿದ್ದರು. ಅವರಿಗೆ ಊಟ ಹಾಕಿದ್ದೇವೆಯೇ ಹೊರತು ಯಾವುದೇ ಪಾರ್ಟಿ ಮಾಡಿಲ್ಲ. ಊಟ ಮಾಡುವ ಜಾಗದಲ್ಲಿ ಮದ್ಯ ಸೇವನೆ ಮಾಡಿರುವ ಬಾಟಲ್ ಇರುವ ಬಗ್ಗೆ ಕಾಣಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ಮಹೇಶ್ ಸಾಹೇಬ್ರ ಬಳಿಯೇ ಕೇಳಿ. ● ಸತೀಶ್, ಎಡಿ, ಬೂದಿಕೋಟೆ ಮೀನು ಸಾಕಾಣಿಕೆ ಕೇಂದ್ರ
● ಎಂ.ಸಿ.ಮಂಜುನಾಥ್