Advertisement

150 ಗಡಿ, 15 ದೇಶ ದಾಟಿ ಲಂಡನ್ ನಿಂದ ಭಾರತಕ್ಕೆ ಸಂಚರಿಸುತ್ತಿದ್ದ ಬಸ್ ಯಾನದ ಬಗ್ಗೆ ಗೊತ್ತಾ!

05:33 PM Dec 23, 2020 | Nagendra Trasi |

ರಸ್ತೆ ಸಾರಿಗೆಯು ಒಂದು ರಾಷ್ತ್ರದ ಜೀವಾಳವಾಗಿರುತ್ತದೆ, ರಸ್ತೆ ಸಾರಿಗೆಯಲ್ಲಿ ಅಧಿಕವಾಗಿ ಪ್ರಯಾಣಿಕರನ್ನು ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ತಲುಪಿಸುವ ಕಾರ್ಯವನ್ನು ಕಡಿಮೆ ವೆಚ್ಚದಲ್ಲಿ ಬಸ್ಸುಗಳು ನಿರ್ವಹಿಸುತ್ತವೆ.ಇಂದು ವಿಶ್ವದ ಅತಿ ಉದ್ದದ ಬಸ್ಸಿನ ಮಾರ್ಗ ಯಾವುದೆಂದರೆ ನಾವು ತಟ್ಟನೆ ಪೆರುವಿನ ಲಿಮಾದಿಂದ ಬ್ರೆಜಿಲ್ಲಿನ ರಿಯೊ ಡಿ ಜನೈರೊ ಎನ್ನುತ್ತೇವೆ, 6200 ಕೀ.ಮಿ ದೂರದ ಈ ಬಸ್ಸಿನ ಪ್ರಯಾಣ ಗಿನ್ನಿಸ್ ವಿಶ್ವ ದಾಖಲೆಯಾಗಿ ಉಲ್ಲೇಖಗೊಂಡಿದೆ ಆದರೆ ಇದಕ್ಕೂ ಪೂರ್ವದಲ್ಲಿ ಜಗತ್ತಿನ ಅತಿ ಉದ್ದನೆಯ ಬಸ್ಸಿನ ಮಾರ್ಗವನ್ನು ಭಾರತ ಹೊಂದಿತ್ತು ಎಂದರೆ ನೀವು ನಂಬಲೇಬೇಕು.

Advertisement

ಇಂದು ಭಾರತದಲ್ಲಿ ಬಡವರ, ಮಧ್ಯಮ ವರ್ಗದವರ ಪಾಲಿನ ಏರೋಪ್ಲೇನ್ಗಳೆಂದರೆ ನಮ್ಮ ನೆಚ್ಚಿನ ‘ಧೂಮ್ರಶಕಟಗಳೇ’ (ಬಸ್ಸುಗಳು). ಆದರೆ ದೂರದ ಲಂಡನ್ನಿಂದ ಕಲ್ಕತ್ತದವರೆಗೆ 1957 ರಲ್ಲಿ ಲಂಡನ್ನಿನ ಕಂಪನಿಯೊಂದು ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿತು ಸುಮಾರು 7900 ಕಿಲೋಮೀಟರ್ ದೂರ ಬಸ್ಸೊಂದು ಸಂಚರಿಸುತ್ತಿತ್ತು. ಇದು ಐಷಾರಾಮಿ ಬಸ್ ಆಗಿತ್ತು ಮತ್ತು ಇದರ ಪ್ರಯಾಣವನ್ನು “ಸಾಹಸ ಯಾತ್ರೆ” ಎಂದೇ ಆಂಗ್ಲರು ಕರೆದಿದ್ದಾರೆ.

ಲಂಡನ್ನಿಂದ ಕಲ್ಕತ್ತಾಗೆ ಬರುತ್ತಿದ್ದ ಬಸ್ಸಿನ ಹೆಸರು “ಆಲ್ಬರ್ಟ್” ಇದರ ಸಂಚಾರ ವ್ಯವಸ್ಥೆಯನ್ನು “ಆಲ್ಬರ್ಟ್ ಟೂರ್ಸ್” ಎಂದು ಕರೆಯಲಾಗುತ್ತಿತ್ತು. ಇದರ ಮೊದಲ ಯಾನ ಆರಂಭವಾಗಿದ್ದು 1957 ಎಪ್ರಿಲ್ 15 ರಂದು ಲಂಡನ್ನಿಂದ ಹೊರಟ ಬಸ್ಸು ಅದೇ ವರ್ಷದ ಜೂನ್ 5 ರಂದು ಅಂದರೆ 51 ದಿನದ ನಂತರ ಭಾರತವನ್ನು ತಲುಪಿತ್ತು.

ಬೆಲ್ಜಿಯಂ, ಪಶ್ಚಿಮ ಜರ್ಮನಿ, ಆಸ್ಟ್ರಿಯಾ ಯುಗೋಸ್ಲೋವಿಯ ,ಬಲ್ಗೇರಿಯಾ ,ಅಫ್ಘಾನಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸಿತು. ಆ ವೇಳೆಗೆ ಇದು ಅನೇಕ ರಾಷ್ಟ್ರಗಳ ಗಮನವನ್ನು ತನ್ನತ್ತ ಸೆಳೆದಿತ್ತು ರಸ್ತೆ ಮತ್ತು ಹಡುಗಗಳನ್ನು (ಲಾಂಚ್ ) ಏರಿ ಆಲ್ಬರ್ಟ್ ಭಾರತದ ನೆಲವನ್ನು ಮುಟ್ಟುತ್ತಿತ್ತು. ಕೆಲವು ದಿನಗಳ ನಂತರ ಆಲ್ಬರ್ಟ್ ಹೆಸರಿನ ಈ ಧೂಮ್ರಶಕಟ ಅಪಘಾತಕ್ಕೊಳಗಾಗಿ ಸಂಚಾರ ಸ್ಥಗಿತಗೊಂಡಿತು ಮತ್ತೇ ಅದನ್ನು ಆರಂಭಿಸುವ ಯೋಚನೆಯನ್ನು ಕೂಡ ಆಲ್ಬರ್ಟ ಟೂರ್ಸ್ ಮಾಡಿರಲಿಲ್ಲ ಆದರೆ ಸ್ಟೀವರ್ಟ್ ಎಂಬ ಬ್ರಿಟಿಷ್ ಪ್ರವಾಸಿ ಇದನ್ನು ಖರೀದಿಸಿ ಪುನರ್ ನಿರ್ಮಿಸಿದನು. ಇದರಿಂದ ಆಲ್ಬರ್ಟ ಯಾನಕ್ಕೆ ಮತ್ತೇ ರೆಕ್ಕೆ ಪುಕ್ಕ ಬಂದಂತಾಯಿತುˌ ಸಂಚಾರ ಕೂಡ ಆರಂಭಗೊಂಡಿತು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಸಹಭಾಗಿತ್ವದಲ್ಲಿ ಆಲ್ಬರ್ಟ್ ಟೂರ್ಸ್ ಭಾರತವನ್ನು ಮಧ್ಯಮ ಮಾರ್ಗವನ್ನಾಗಿಸಿಕೊಂಡು ಸಿಡ್ನಿಯಿಂದ ಲಂಡನ್ನಿಗೆ ಡಬಲ್ ಡೆಕ್ಕರ್ ಬಸ್ ಸಂಚಾರವನ್ನು ಆರಂಭಿಸಿದರು.

Advertisement

ಆಲ್ಬರ್ಟ್ ಆಸ್ಟ್ರೇಲಿಯಾದ ಬಂದರಿನಿಂದ ಲಾಂಚ್ ಗಳ ಮೂಲಕ ಸಾಗಿಸಲ್ಪಟ್ಟು ಸಿಂಗಾಪುರ್ ,ಬರ್ಮಾ, ಥೈಲ್ಯಾಂಡ್ ಮೂಲಕ ಭಾರತವನ್ನು ತಲುಪುತ್ತಿತ್ತು . ಅಕ್ಟೋಬರ್ 8 , 1968 ರಿಂದ ಎರಡನೇ ಹಂತದ ಯಾನ ಆರಂಭಗೊಂಡಿತು ಸಿಡ್ನಿಯಿಂದ ಲಂಡನ್ನಿಗೆ ಭಾರತದ ಮೂಲಕ ಹಾದು ಹೋಗಿ 132 ದಿನಗಳ ನಂತರ ಈ ಬಸ್ಸು ಲಂಡನ್ ತಲುಪಿತ್ತು. ಇದು ಡಬಲ್ ಡೆಕ್ಕರ್ ಬಸ್ ಆದ ಕಾರಣ ಕೆಳಗಿನ ಹಂತದಲ್ಲಿ ಊಟದ ವ್ಯವಸ್ಥೆ ಮತ್ತು ಓದಲು ಪುಸ್ತಕದ ವ್ಯವಸ್ಥೆಯನ್ನು ಮಾಡಲಾಗಿತ್ತು ಪ್ರಯಾಣಿಕರಿಗೆ ವಿಶೇಷವಾದ ಖಾದ್ಯಗಳನ್ನು, ಪಾನೀಯಗಳನ್ನು ನೀಡಲಾಗುತ್ತಿತ್ತು.

ಪ್ರಯಾಣಿಕರು ನಿರಾಯಾಸವಾಗಿ ಮಲಗಲು ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆಯನ್ನು ಮತ್ತು ರತ್ನಗಂಬಳಿಯನ್ನೇ ನೀಡಲಾಗಿತ್ತು, ಮೇಲ್ಭಾಗದಲ್ಲಿ ವೀಕ್ಷಣಾ ಸ್ಥಳಗಳಿದ್ದವು ಸಂಚಾರ ಮಾಡುವಾಗ ಪ್ರೇಕ್ಷಣೀಯ ಸ್ಥಳಗಳನ್ನು, ಎದುರಾಗುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಿತ್ತು. ಭಾರತದಲ್ಲಿ ಆಗ್ರಾದ ತಾಜ್ ಮಹಲ್ , ಗಂಗಾನದಿ ಬಳಿಯ ಬನಾರಸ್ ದಲ್ಲಿ ಪ್ರಯಾಣಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು .ಈ ಬಸ್ಸು ಓಡಾಡುವ ಐಷಾರಾಮಿ ಮನೆಯಾಗಿತ್ತೆಂದರೆ ಅತಿಶಯೋಕ್ತಿಯೆನಿಸದು.

ಅಲ್ಬರ್ಟ್ ಟೂರಿಸ್ಟ್ ನ ಬಸ್ಸುಗಳು 1957 ರಿಂದ 1976 ರವರೆಗೆ ಇಂಗ್ಲೆಂಡಿನಿಂದ ಕಲ್ಕತ್ತಾಗೆ ಹದಿನೈದು ಬಾರಿ ಬಂದು ಹೋದರೆ, ಲಂಡನ್ನಿನಿಂದ ಸಿಡ್ನಿಯವರೆಗೆ ನಾಲ್ಕು ಬಾರಿ ಸಂಚರಿಸಿತ್ತು. ಇದು 150 ಗಡಿಗಳನ್ನು ದಾಟಿ ಸಂಚರಿಸುತ್ತಿದ್ದ ಏಕೈಕ ವಾಹನವಾಗಿ ಸುಮಾರು ಹದಿನೈದು ದೇಶಗಳನ್ನು ದಾಟಿ ಬರುತ್ತಿತ್ತು ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ.

ಆಲ್ಬರ್ಟ್ ಬಸ್ಸಿನ ಪ್ರಯಾಣದ ದರ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಅಂದು 13,590 ರೂ ಗಳಷ್ಟಿತ್ತು. 1976ರ ಬಳಿಕ ಆಲ್ಬರ್ಟ್ ತನ್ನ ಸೇವೆಯನ್ನು ನಿಲ್ಲಿಸಿತು “ಸ್ನೇಹಮಯಿ ರಾಯಭಾರಿ” ಎಂದೇ ಈ ಬಸ್ಸು ಅಂದು ಪ್ರಚಲಿತವಾಗಿತ್ತು. ಈ ಯಾನದ ಕುರಿತು ಲಂಡನ್ನಿನ ಸಾರಿಗೆ ಸಂಸ್ಥೆಯೊಂದು ಮೊದಲು ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಚಿತ್ರಗಳ ಸಮೇತವಾಗಿ ವರದಿ ಮಾಡಿತ್ತು, ನಂತರ “ದಿ ನ್ಯೂಯಾರ್ಕ್ ಟೈಮ್ಸ್ ” ಮತ್ತು “ದಿ ಸ್ಟೇಟ್ಸ್ ಮ್ಯಾನ್ ” ಪತ್ರಿಕೆಗಳ ವರದಿಗಳು ಹೊರಬಂದವು ಹೀಗಾಗಿ ಜಗತ್ತಿನ ಅತಿ ಉದ್ದದ ಬಸ್ ಸಂಚಾರ ಐವತ್ತರ ದಶಕದ ವೇಳೆಯಲ್ಲಿ ಲಂಡನ್ ಮತ್ತು ಭಾರತದ ಮಧ್ಯೆ ಇತ್ತು ಎಂಬುದು ಸಾಬೀತಾಗಿದೆ ಇಂತಹ ಐಷಾರಾಮಿ ದೂರದ ಪ್ರಯಾಣದ ಅನುಭವ ಸವಿದ ಪ್ರಯಾಣಿಕರೇ ಪುಣ್ಯವಂತರಲ್ಲವೆ. ಹೀಗೆ ಅನೇಕ ಅದ್ಬುತ ವಿಚಾರಗಳು ಭಾರತದ ಒಡಲಾಳದಲ್ಲಿ ಹುದುಗಿಕೊಂಡಿದೆ…

ದರ್ಶನ ನಾಯ್ಕ
ಮಿರ್ಜಾನ್ ,ಕುಮಟ

Advertisement

Udayavani is now on Telegram. Click here to join our channel and stay updated with the latest news.

Next