ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನಾದ್ಯಂತ ನ. 23 ರಿಂದ 27 ರವರೆಗೆ 1.23 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ವಿ. ಗಿರೀಶ್ ತಿಳಿಸಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡಾಜೋಲ್ ನುಂಗಿಸುವ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ತಾಲೂಕಿನಲ್ಲಿ 530 ಅಂಗನವಾಡಿಗಳಿದ್ದು, 1 ರಿಂದ ಐದು ವರ್ಷದೊಳಗಿನ 30,847 ಮಕ್ಕಳಿದ್ದಾರೆ. 532 ಸರ್ಕಾರಿ/ಖಾಸಗಿ ಶಾಲೆಗಳಲ್ಲಿ ಒಂದರಿಂದ ಹತ್ತನೆ ತರಗತಿಗಳಲ್ಲಿ ಓದುತ್ತಿರುವ ಆರರಿಂದ ಹದಿನಾರು ವರ್ಷದೊಳಗಿನ 68,487 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಬೇಕಿದೆ ಎಂದರು.
ಪಿಯುಸಿ, ಡಿಪ್ಲೋಮಾ, ಐಟಿಐ, ನರ್ಸಿಂಗ್ ಇತರೆ 190 ಕಾಲೇಜುಗಳಲ್ಲಿ 23,802 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ಸತ್ಯನಾರಾಯಣ ಮಾತನಾಡಿ, ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿರಬೇಕು. ಪ್ರತಿಯೊಂದು ಮಗುವಿಗೂ ತಪ್ಪದೇ ಜಂತುಹುಳು ನಿವಾರಣಾ ಮಾತ್ರೆಯನ್ನು ನುಂಗಿಸಬೇಕು ಎಂದು ತಿಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ ಮಾತನಾಡಿ, ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸಮರ್ಪಕ ಮಾಹಿತಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಆ ದಿನ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾತ್ರೆಗಳನ್ನು ನೀಡಬೇಕು. ಸಮಾಜ ಕಲ್ಯಾಣಾಧಿಕಾರಿ ಹಾಗೂ ಬಿಸಿಎಂ ಅಧಿ ಕಾರಿಗಳು ತಮ್ಮ ವ್ಯಾಪ್ತಿಯ ವಸತಿನಿಲಯಗಳಲ್ಲಿನ ಮಕ್ಕಳ ಸಂಖ್ಯೆಯನ್ನಾಧರಿಸಿ ತಾಲೂಕು ಆರೋಗ್ಯಾಧಿಕಾರಿಗಳಿಂದ ಮಾತ್ರೆಗಳನ್ನು ಪಡೆದು ಮಕ್ಕಳಿಗೆ ನುಂಗಿಸಿದ ನಂತರ ಸಂಪೂರ್ಣ ವರದಿ ನೀಡಬೇಕೆಂದು ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್. ಮಂಜುನಾಥ್ ಮಾತನಾಡಿದರು. ಸಭೆಯಲ್ಲಿ ಬಿಸಿಎಂ ಅಧಿಕಾರಿ ಮುರಳಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಹತಿಕಾ ಬೇಗಂ, ಸಮಾಜಕಲ್ಯಾಣಾಧಿ ಕಾರಿ ಅನಿತಾ, ಡಾ| ಮಹೇಂದ್ರಕುಮಾರ್, ಡಾ| ವಾಣಿ, ಡಾ| ಸುಪ್ರಿತಾ, ಡಾ. ಮಂಜುಳಾ ಮೊದಲಾದವರು ಭಾಗವಹಿಸಿದ್ದರು.
ಕೋವಿಡ್ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಶೇ. 99.05ರಷ್ಟು ಲಸಿಕೆ ನೀಡಲಾಗಿದೆ. ಇಷ್ಟೊಂದು ಪ್ರಗತಿ ಸಾಧಿ ಸಲು ಎಲ್ಲಾ ಇಲಾಖೆಗಳ ಸಹಕಾರ ದೊರೆತಿದೆ. ಇದೇ ಮಾದರಿಯಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಬೇಕು. –
ಸತ್ಯನಾರಾಯಣ, ತಹಶೀಲ್ದಾರ್