Advertisement
ತನ್ನಷ್ಟಕ್ಕೆ ಬೆಳೆದ ಈ ಗಡ್ಡದ ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತ್ತಿಗೆ, ಯಾರದೋ ಸನ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು ಕೇಳುವುದು, “ಯಾರಾತ ಆ ಗಡ್ಡದ ಹುಡುಗ?’ ಎಂದು. ಅದೆಷ್ಟೋ ಸಲ ಮಾತಾನಾಡಿಸಿದ್ದೂ ಇದೆ. “ಮನೆ ಎಲ್ಲಿ? ಯಾರ ಮಗ? ಏನು ಓದುವುದು? ಏನು ಉದ್ಯೋಗ?’ ಎಂದು ಜನಗಣತಿಯ ಟೀಚರ್ ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯ ಅನುಭವವಾದದ್ದಿದೆ. ನನ್ನಂಥ ಗಡ್ಡಧಾರಿಗಳನ್ನೇಕೆ ಅಪರಾಧಿ ಥರ ನೋಡುತ್ತಾರೆಂಬುದಕ್ಕೆ ಇಲ್ಲಿಯವರೆಗೆ ಕಾರಣ ಸಿಕ್ಕಿಲ್ಲ.
Related Articles
Advertisement
ಯಾರಾದರೂ ಅದು ಪ್ರೇಮ ವೈಫಲ್ಯ ಇದ್ದಿರಬೇಕು ಎಂದು ಸಂಶಯಿಸಿದ್ದರೇ? ಇಲ್ಲ! ಅಚ್ಚರಿ ಎಂದರೆ, ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು 11ರ ಬಾಲಕಿಯೊಬ್ಬಳ ಪತ್ರವಂತೆ. 1860ರ ಅಕ್ಟೋಬರ್, ಆಗಷ್ಟೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದರಲ್ಲಿತ್ತು. ರಿಪಬ್ಲಿಕನ್ ಪಕ್ಷದಿಂದ ಲಿಂಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ ನ್ಯೂಯಾರ್ಕ್‌ನ ವೆಸ್ಟ್ ಫೀಲ್ಡ್‌ನಿಂದ ಗ್ರೇಸ್ ಬೆಡೆಲ್ಸ ಎಂಬ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ ಅಬ್ರಹಾಂ ಲಿಂಕನ್‌ರ ಕೈ ಸೇರಿತ್ತು. ಅದರಲ್ಲಿ “ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರೂ ದೊಡ್ಡವಳಾಗಿದ್ದರೆ ನಿಮಗೆ ವೋಟ್ ಮಾಡುತ್ತಿದ್ದೆ. ಆದರೇನಂತೆ, ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ವೋಟ್ ಮಾಡುವಂತೆ ಕೇಳುತ್ತೇನೆ. ಆದರೆ ಒಂದು ಷರತ್ತು: ನಿಮ್ಮ ಮುಖ ತುಂಬಾನೆ ಸಣಕಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ವೋಟು ಹಾಕುವಂತೆ ಒತ್ತಾಯಿಸುತ್ತಾರೆ. ಆಗ ನೀವು ನಮ್ಮ ಅಧ್ಯಕ್ಷರಾಗೋದು ಖಂಡಿತ’ ಎಂದು ಬರೆದಿತ್ತು. ಆ ಪುಟಾಣಿಯ ಬಯಕೆಯಂತೆಯೇ ಲಿಂಕನ್ ಜೀವನಪೂರ್ತಿ ಗಡ್ಡಧಾರಿಯಾಗಿಯೇ ಬದುಕಿದರು.
ಅಂಥದ್ದೊಂದು ಅದೃಷ್ಟ ನನ್ನ ಪಾಲಿಗೂ ಯಾಕೆ ಬರಬಾರದು? ಅದಕ್ಕಾಗಿ ಕಾಯುತ್ತಿರುವೆ. ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನು, ನಸುನಗುವ ತುಟಿಗಳನ್ನು ಅಡಗಿಸಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನ್ನಲ್ಲ, ಅವನು ಅವನೇ… ಬದಲಾದ್ದು ನಮ್ಮ ನೋಟ ಅಷ್ಟೇ!
– ಭರತೇಶ ಅಲಸಂಡೆಮಜಲು