Advertisement

ಕೊಡಗಿನಲ್ಲಿ ಆತಂಕ ಮೂಡಿಸಿದ ಗಾಳಿಯ ವೇಗ: ಧರೆಗುರುಳಿದ ಮರಗಳು

06:47 PM Jul 13, 2022 | Team Udayavani |

ಮಡಿಕೇರಿ : ಕಳೆದ ಎರಡು ವಾರಗಳಿಂದ ಮಹಾಮಳೆಯಲ್ಲಿ ಸಿಲುಕಿರುವ ಕೊಡಗು ಜಿಲ್ಲೆ ಇದೀಗ ರಭಸವಾಗಿ ಬೀಸುತ್ತಿರುವ ಅತಿ ಗಾಳಿಯಿಂದ ಆತಂಕವನ್ನು ಎದುರಿಸುತ್ತಿದೆ. ಹಲವು ಕಡೆ ಮರಗಳು ಧರೆಗುರುಳಿದ್ದು, ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಮತ್ತು ಕಂಬಗಳೂ ಬಿದ್ದಿರುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

Advertisement

ಜಿಲ್ಲೆಯಲ್ಲಿ ಮಂಗಳವಾರ ಹಗಲು ಕೊಂಚ ಬಿಡುವು ನೀಡಿದ್ದ ಮಹಾಮಳೆ ರಾತ್ರಿಯಾಗುತ್ತಲೇ ಭಾರೀ ಗಾಳಿಯೊಂದಿಗೆ ಮತ್ತೆ ಅತಿಯಾಗತೊಡಗಿದೆ. ಗಾಳಿಯ ವೇಗದಿಂದ ಆತಂಕಗೊಂಡ ಜನ, ಜೀವವನ್ನು ಕೈಯಲ್ಲಿ ಹಿಡಿದು ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂದು ಕೂಡ ಗಾಳಿ, ಚಳಿ, ಮಳೆ ಮುಂದುವರೆದಿದೆ. ಅತಿ ಶೀತದಿಂದಾಗಿ ಜಾನುವಾರುಗಳು ಸಾವನ್ನಪ್ಪಿದ ಘಟನೆಯೂ ನಡೆದಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಕನ್ನಂಡಬಾಣೆ ಬಡಾವಣೆಯ ತಂಗಮ್ಮ ಎಂಬವರ ಮನೆಯ ಮೇಲೆ ಮರ ಬಿದ್ದು, ಹಾನಿ ಸಂಭವಿಸಿದೆ. ಉತ್ತರ ಕೊಡಗಿನ ಶನಿವಾರಸಂತೆ-ಕೊಡ್ಲಿಪೇಟೆ ರಸ್ತೆಯ ನಡುವೆ ಭಾರೀ ಗಾತ್ರದ ಮರವೊಂದು ಉರುಳಿ ಸಂಚಾರಕ್ಕೆ ತೊಡಕಾಗಿತ್ತು. ಇದನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಐಗೂರು ವ್ಯಾಪ್ತಿಯ ಕೋವರ್ ಕೊಲ್ಲಿ ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಉರುಳಿ ಸಂಚಾರಕ್ಕೆ ತೊಡಕುಂಟಾಯಿತು. ಸಿದ್ದಾಪುರದಲ್ಲಿ ಮನೆಯೊಂದರ ಗೋಡೆ ಕುಸಿದ ಘಟನೆ ನಡೆದಿದೆ. ಬೇಳೂರು ಗ್ರಾಮ ಪಂಚಾಯ್ತಿಯ ಬಜೆಗುಂಡಿಯಲ್ಲಿ ವಿಜಯ ಎಂಬವರ ಮನೆಯ ಹಿಂಭಾಗ ಕುಸಿದಿದೆ. ಕೊಡ್ಲಿಪೇಟೆಯ ಮಾದ್ರೆ ಗ್ರಾಮದ ಗುಂಡೆಗೌಡ ಎಂಬವರ ಮನೆ ಬಹುತೇಕ ಕುಸಿದಿದೆ.

ಶನಿವಾರಸಂತೆಯ ಮುಳ್ಳೂರು ಗ್ರಾಮದ ಕೆ.ಟಿ.ಗಂಗಮ್ಮ ಎಂಬವರ ಮನೆಯ ಗೋಡೆ ಕುಸಿತಕ್ಕೆ ಒಳಗಾಗಿದ್ದು, ಪಂಚಾಯ್ತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಜಿಲ್ಲೆಯ ವಿವಿಧೆಡೆ ಪ್ರವಾಹದ ಪರಿಸ್ಥಿತಿ ಮುಂದುವರೆದಿದ್ದು, ನದಿಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ.

Advertisement

ವಿದ್ಯುತ್ ಮಾರ್ಗಕ್ಕೆ ಹಾನಿ
ಕುಶಾಲನಗರ- ಮಡಿಕೇರಿ ನಡುವಿನ 66 ಕೆ.ವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದ ಪರಿಣಾಮ ಕುಶಾಲನಗರ ಸೇರಿದಂತೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನದವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಐಗೂರು ಮುಖ್ಯ ರಸ್ತೆಯಲ್ಲಿ 11 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಮರವನ್ನು ತೆರವುಗೊಳಿಸಿ, ವಿದ್ಯುತ್ ಮಾರ್ಗವನ್ನು ದುರಸ್ತಿ ಪಡಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಲು ಸಾಲು ವಿದ್ಯುತ್ ಕಂಬಗಳು ಬಿದ್ದಿದ್ದು, ಸೆಸ್ಕ್ ಸಿಬ್ಬಂದಿಗಳಿಗೆ ದುರಸ್ತಿ ಕಾರ್ಯ ಸವಾಲಾಗಿ ಪರಿಣಮಿಸಿದೆ.

ಜಾನುವಾರಗಳ ಸಾವು
ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಒಂದೇ ದಿನ ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಟ್ಟದಳ್ಳಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕೊಪ್ಪ ಗ್ರಾಮದ ಹೂವಮ್ಮ ಅವರಿಗೆ ಸೇರಿದ 10 ವರ್ಷದ ಎತ್ತು ಮೇಯಲು ತೆರಳಿದ್ದ ಸಂದರ್ಭ ಗದ್ದೆಯಲ್ಲಿ ಸಾವನ್ನಪ್ಪಿದ್ದು, ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ.ಕುಂದಳ್ಳಿ ಸಮೀಪದ ಕನ್ನಳ್ಳಿ ಗ್ರಾಮದ ಸರೋಜ ಎಂಬವರಿಗೆ ಸೇರಿದ 6 ತಿಂಗಳ ಗಂಡು ಕರು ಅತೀ ಶೀತದಿಂದ ಸಾವನ್ನಪ್ಪಿದ್ದು, ಮಾಲೀಕರಿಗೆ ರೂ.5 ನಷ್ಟ ಸಂಭವಿಸಿದೆ.

ತೋಳೂರು ಶೆಟ್ಟಳ್ಳಿ ಗ್ರಾಮದ ಹೆಚ್.ಕೆ.ಗುರಪ್ಪ ಅವರಿಗೆ ಸೇರಿದ ಒಂದೂವರೆ ವರ್ಷದ ಕರು ಸಾವನ್ನಪ್ಪಿದೆ. ಮೇಯಲು ಬಿಟ್ಟಿದ್ದ ಜಾನುವಾರು ಶೀತಕ್ಕೆ ಬಲಿಯಾಗಿದೆ.

ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಕರಿಬಸವ ರಾಜು, ಉಮೇಶ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ಶೇ.114.26 ರಷ್ಟು ಮಳೆ

ಕಳೆದ ಮೂರು ವರ್ಷದ ಇದೇ ಅವಧಿಯಲ್ಲಿ ಮಳೆಯನ್ನು ಗಮನಿಸಿದಾಗ 2019 ರಲ್ಲಿ ಶೇ.116.73 ರಷ್ಟು, 2020 ರಲ್ಲಿ 105.86 ರಷ್ಟು ಮಳೆಯಾಗಿತ್ತು, 2021 ರಲ್ಲಿ 97.32 ರಷ್ಟು ಮಳೆಯಾಗಿತ್ತು. ಪ್ರಸಕ್ತ ವರ್ಷ (2022) ಇದುವರೆಗೆ ಶೇ.114.26 ರಷ್ಟು ಮಳೆಯಾಗಿದೆ.

ಸಹಾಯವಾಣಿ
ಜಿಲ್ಲಾಡಳಿತ ವತಿಯಿಂದ ದಿನದ 24 ಗಂಟೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ 0872-221077, ವಾಟ್ಸ್ಆಫ್ ಸಂಖ್ಯೆ 8550001077 ಗೆ ಮಳೆ ಹಾನಿ ಸಂಬAಧ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

ಹಾಗೆಯೇ ತಾಲ್ಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮಡಿಕೇರಿ ತಾಲ್ಲೂಕು 08272-228396, ಮಡಿಕೇರಿ ನಗರಸಭೆ ವ್ಯಾಪ್ತಿ 08272-220111, ವಿರಾಜಪೇಟೆ ತಾಲ್ಲೂಕು 08274-256328, ಸೋಮವಾರಪೇಟೆ ತಾಲ್ಲೂಕು 08276-282045 ನ್ನು ಸಂಪರ್ಕಿಸಬಹುದು.

ಕೇರಳದ ಕೊಲ್ಲಂ ಜಿಲ್ಲೆಯ ಅಮೃತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ತಂಡವು ಮಡಿಕೇರಿಯ ಚಾಮುಂಡೇಶ್ವರಿ ನಗರ, ವಿರಾಜಪೇಟೆಯ ಅಯ್ಯಪ್ಪ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next