ಸುಮಾರು ಅರ್ಧ ಶತಮಾನದ ಹಿಂದೆ ಥಾಣೆ ಜಿಲ್ಲೆಯ ಕಿಸನ್ ನಗರ ಪರಿಸರದ ತುಳು-ಕನ್ನಡಿಗರು ಒಟ್ಟುಗೂಡಿ 1969 ರಲ್ಲಿ ನವೋದಯ ಕನ್ನಡ ಸೇವಾ ಸಂಘವನ್ನು ಸ್ಥಾಪಿಸಿದರು. ಕನ್ನಡ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಸಂಘದ ಹಿರಿಯರು ಶಿಕ್ಷಣದ ಮಹತ್ವವನ್ನು ಅರಿತು 1970 ರಲ್ಲಿ ನವೋದಯ ಇಂಗ್ಲಿಷ್ ಹೈಸ್ಕೂಲ್ನ್ನು ಸ್ಥಾಪಿಸಿದರು. 1971 ರಲ್ಲಿ ಸಂಘವು ‘ನವೋದಯ ಸದನ’ ಎಂಬ ತನ್ನ ಸ್ವಂತ ಕಟ್ಟಡವನ್ನು ತೆರೆದು ಅದರಲ್ಲಿ ಸಂಘ ಮತ್ತು ಶಾಲೆಗೆ ನೆಲೆಯನ್ನು ಕಲ್ಪಿಸಿತು. ಕಿಸನ್ ನಗರ -1 ನಲ್ಲಿರುವ ಶಾಲಾ ಕಟ್ಟಡದ ಉದ್ಘಾಟನೆ ಆದದ್ದು 1992-1993 ರಲ್ಲಿ. 1986-1987ರ ಅವಧಿಯಲ್ಲಿ ದ್ವಿತೀಯ ವಿಭಾಗಕ್ಕೆ ಅನುಗುಣವಾಗಿ ಥಾಣೆಯ ಶಿವಾಜಿ ನಗರದಲ್ಲಿ ಹೊಸ ಕಟ್ಟಡವನ್ನು ಖರೀದಿಸಲಾಯಿತು. ವರ್ಷಗಳು ದಶಕಗಳಿಗೆ ದಾರಿ ಮಾಡಿಕೊಟ್ಟಂತೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ವಿದ್ಯಾರ್ಜನೆಯನ್ನು ಪಡೆದರು. 2016 ರಲ್ಲಿ ಸಂಸ್ಥೆಯು ನವೋದಯ ಜೂನಿಯರ್ ಕಾಲೇಜ್ ಆಫ್ ಸೈನ್ಸ್ ಆ್ಯಂಡ್ ಕಾಮರ್ಸ್ ಇದರ ಉದ್ಘಾಟನೆಯೊಂದಿಗೆ ಶೈಕ್ಷಣಿಕ ಉತ್ಕೃಷ್ಟತೆಯ ಹೊಸ ರಂಗಕ್ಕೆ ಪಾದಾರ್ಪಣೆ ಮಾಡಿತು.
ಪೊವಾಯಿ ಕನ್ನಡ ಸೇವಾ ಸಂಘ:
ಒಂದೂವರೆ ದಶಕಗಳಿಂದ ಪೊವಾಯಿ ಪರಿಸರದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸದಾ ಸ್ಪಂದಿಸುವ ಹೆಮ್ಮೆಯ ಸಂಸ್ಥೆ ಕನ್ನಡ ಸೇವಾ ಸಂಘ ಪೊವಾಯಿ. ತನ್ನ ಹುಟ್ಟಿನಿಂದಲೇ ಶಿಕ್ಷಣವೇ ಮೂಲ ಮಂತ್ರವೆಂಬುದೇ ಸಂಸ್ಥೆಯ ಧ್ಯೇಯ ಉದ್ದೇಶ. ಬಡ ವರ್ಗದ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಆರಂಭದ ದಿನಗಳಲ್ಲಿ ಕನ್ನಡ ಪರ ಕಾಳಜಿಯಿಂದ ಆರಂಭವಾದ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಂತರ ಪೊವಾಯಿ ಪರಿಸರದ ಕನ್ನಡಿಗರ ಮನೆಗೆ ತೆರಳಿ ಅವರ ಸ್ಥಿತಿಗತಿಯನ್ನು ಅರಿತು ಸಂಘದ ಮುಖಾಂತರ ಅವರಿಗೆ ಸಹಾಯ ಮಾಡುತ್ತಾ ಬಂದಿರುವುದು ಈ ಸಂಸ್ಥೆಯ ಹೆಗ್ಗಳಿಕೆ.
1997ರಲ್ಲಿ ಉದ್ಘಾಟನೆಗೊಂಡ ಕನ್ನಡ ಸಂಘದಲ್ಲಿ ಸಮಾಜಮುಖೀ ಕಾರ್ಯ ನಡೆಸಿದ ಸಾಧಕರಿಗೆ ಸಮಾಜರತ್ನ ಹಾಗೂ ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿಗಾಗಿ ದುಡಿದ ಸಾಧಕರಿಗೆ ಕನ್ನಡಜ್ಯೋತಿ ಎಂಬ ಬಿರುದನ್ನು ನೀಡಿ ಪ್ರತೀ ವರ್ಷ ಗೌರವಿಸಲಾಗುತ್ತದೆ. ಸಾಮಾಜಿಕ ಕಾರ್ಯಕ್ರಮಳೊಂದಿಗೆ ಸಾಹಿತ್ಯಕ, ಸಾಂಸ್ಕೃತಿಕ, ಧಾರ್ಮಿಕ, ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ಕಾರ್ಯಕ್ರಮಗಳು ಸಂಘದಲ್ಲಿ ನಿರಂತರವಾಗಿ ನಡೆಯುತ್ತಿದೆ.