Advertisement
ಎಲ್ಲ ಸವಾಲುಗಳನ್ನು ಎದುರಿಸಿ ಒಂದಿಷ್ಟು ಬೆಳೆಯನ್ನು ರೈತರು ರಕ್ಷಿಸಿಕೊಂಡಿದ್ದಾರೆ. ಭತ್ತದ ಪೈರು ಈಗ ತೆನೆ ಬಿಟ್ಟು ಕಟಾವಿಗೆ ತಯಾರಾಗುತ್ತಲೇ ಕಾಡುಪ್ರಾಣಿಗಳು ಲಗ್ಗೆಯಿಟ್ಟು ಫಸಲು ತಿನ್ನುತ್ತಿವೆ. ಇನ್ನಷ್ಟು ಫಸಲನ್ನು ತುಳಿದು ನಾಶ ಮಾಡುತ್ತಿವೆ. ರಾತ್ರಿ ವೇಳೆ ಕಾಡು ಹಂದಿಗಳು, ಹಗಲಲ್ಲಿ ನವಿಲು, ಗಿಳಿ ಹಾಗೂ ಗುಬ್ಬಚ್ಚಿಗಳ ಹಿಂಡು ದಾಳಿ ಮಾಡಿದರೆ, ಮಂಗಗಳ ಗುಂಪು ಪೈರು ನಾಶ ಮಾಡುತ್ತಿದೆ. ಸಕಾಲದಲ್ಲಿ ಪೈರು ಕಟಾವು ಮಾಡಲಾರದೆ ರೈತರು ನಷ್ಟ ಅನುಭವಿಸುವಂತಾಗಿದೆ.
ಕೂಲಿ ಕಾರ್ಮಿಕರ ಕೊರತೆಯ ಪರಿಣಾಮ ಕೆಲವು ವರ್ಷಗಳಿಂದ ಬೇಸಾಯ ಯಾಂತ್ರೀಕೃತವಾಗಿಯೇ ನಡೆಯುತ್ತಿದೆ. ಗದ್ದೆ ಉಳುಮಗೆ ಪವರ್ ಟಿಲ್ಲರ್ ಉಪಯೋಗಿಸಿದರೆ ನೇಜಿ ನಾಟಿಗೂ ಯಂತ್ರದ ಮೊರೆಹೋಗುತ್ತಾರೆ. ಇದೀಗ ಕಟಾವಿಗೂ ಯಂತ್ರವನ್ನು ಉಪಯೋಗಿಸುತ್ತಿದ್ದು, ಭತ್ತ ಬೇರ್ಪಡಿಸುವ ಕಾರ್ಯವನ್ನೂ ಯಂತ್ರದ ಮೂಲಕವೇ ನಡೆಸಲಾಗುತ್ತಿದೆ. ಕೂಲಿ ದುಬಾರಿ ಎನಿಸಿದಾಗ ರೈತರು ಯಂತ್ರಗಳ ಮೂಲಕ ಎಲ್ಲ ಕೆಲಸಗಳನ್ನು ಸುಸೂತ್ರವಾಗಿ ನಿಭಾಯಿಸುತ್ತಿದ್ದರು. ಆದರೆ. ಈ ಬಾರಿ ಪೈರಿಗೆ ಕಾಡುಪ್ರಾಣಿಗಳ ದಾಳಿಯಾಗಿದ್ದು, ಭತ್ತದ ಸಸಿಗಳು ಗದ್ದೆಯಲ್ಲಿ ಅಡ್ಡಬಿದ್ದಿರುವ ಕಾರಣ ಕೂಲಿಯಾಳುಗಳ ಮೂಲಕವೇ ಕಟಾವು ಮಾಡಿಸುವುದು ಅನಿವಾರ್ಯವಾಗಿದೆ. ಯಂತ್ರಗಳ ಮೂಲಕ ಕಟಾವು ಅಸಾಧ್ಯವಾಗಿದೆ. ಕೂಲಿಯಾಳುಗಳು ಬೇರೆ ಗದ್ದೆಗಳಲ್ಲಿ ಕಟಾವು ಮಾಡುತ್ತಿರುವ ಕಾರಣ ಹಲವು ರೈತರು ಕಾಯುವುದು ಅನಿವಾರ್ಯವಾಗಿದೆ. ಸಂಜೆ ವೇಳೆ ಕೃತಕ ನೆರೆ
ವರ್ಷದ ಆರಂಭದಲ್ಲೇ ಗದ್ದೆಗಳಿಗೆ ನೆರೆ ನೀರು ನುಗ್ಗಿದ್ದರ ಪರಿಣಾಮ ಕಡಬ ತಾಲೂಕಿನ ಆಲಂಕಾರು ಅತೀ ಹೆಚ್ಚು ಭತ್ತದ ಬೇಸಾಯವನ್ನು ಕಳೆದುಕೊಂಡಿದೆ. ಆಲಂಕಾರು ಗ್ರಾಮದ ಪಜ್ಜಡ್ಕ, ಪೊಯ್ಯಲಡ್ಡ, ಬುಡೇರಿಯಾ, ಶರವೂರು ಹಾಗೂ ಕೊಂಡಾಡಿ ಮುಂತಾದ ಪ್ರದೇಶಗಳಲ್ಲಿ 17 ಎಕ್ರೆ ಗದ್ದೆ ನೆರೆ ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿತ್ತು. ಭತ್ತ ಕಟಾವಿನ ಸಮಯ ಸಮೀಪಿಸುತ್ತಿದ್ದಂತೆ ಹಿಂಗಾರು ಮಳೆಯೂ ಚುರುಕುಗೊಂಡಿದ್ದು, ಸಂಜೆ ವೇಳೆ ಗಾಳಿ- ಮಳೆಯಾಗಿ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ತೆನೆ ತುಂಬಿದ ಪೈರು ನೆಲ ಕಚ್ಚುತ್ತಿದೆ. ಗದ್ದೆಯಲ್ಲಿ ನೀರು ನಿಂತಿರುವ ಕಾರಣ ಅಡ್ಡ ಬಿದ್ದಿರುವ ತೆನೆಯಲ್ಲಿ ಮೊಳಕೆಯೊಡೆಯುವ ಹಂತ ತಲುಪಿದೆ. ಕಟಾವು ಮಾಡಿದರೂ ಈ ಸಲ ದೀರ್ಘ ಕಾಲದ ತನಕ ಭತ್ತವನ್ನು ಸಂಗ್ರಹಿಸಲು ಅಸಾಧ್ಯ.
Related Articles
ಕಾಡು ಪ್ರಾಣಿಗಳ ದಾಳಿಯಿಂದಾಗಿ ಪೈರು ನೆಲ ಕಚ್ಚಿದೆ. ಇಲ್ಲದಿದ್ದರೆ ಆರು ದಿನಗಳಲ್ಲಿ ಕಟಾವು ಕೆಲಸ ಮುಗಿಯುತ್ತಿತ್ತು. ಯಂತ್ರದ ಮೂಲಕವಾದರೆ ಮೂರು ಗಂಟೆ ಸಾಕಿತ್ತು. ಈ ಬಾರಿ ಯಂತ್ರ ಉಪಯೋಗಿಸುವ ಹಾಗಿಲ್ಲ. ಕೂಲಿಯಾಳುಗಳ ಮೂಲಕವೇ ಕಟಾವು ಮಾಡಿಸಬೇಕು. ಆರು ದಿನಗಳಲ್ಲಿ ಮುಗಿಯುವ ಕೆಲಸಕ್ಕೆ 12 ದಿನ ಹಿಡಿಯುವುದರಲ್ಲಿ ಸಂಶಯವಿಲ್ಲ. ದ್ವಿಗುಣ ಕೂಲಿ ಹೆಚ್ಚುವರಿ ಹೊರೆ ಎನಿಸಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.
Advertisement
ಪರಿಶೀಲಿಸಿ ಪರಿಹಾರ ಕಾಡು ಪ್ರಾಣಿಗಳ ದಾಳಿಯಾದ ಬಗ್ಗೆ ಸವಿಸ್ತಾರವಾದ ಮಾಹಿತಿಯುಳ್ಳ ಅರ್ಜಿಯನ್ನು ವಲಯ ಅಣ್ಯಾಧಿಕಾರಿಗಳ ಕಚೇರಿಗೆ ಲಿಖಿತ ಹೇಳಿಕೆಯ ಮೂಲಕ ನೀಡಬೇಕಾಗುತ್ತದೆ. ದಾಳಿಯಾದ ಬಗ್ಗೆ ಸೂಕ್ತ ಚಿತ್ರಗಳು ಮತ್ತು ಜಾಗದ ಪಹಣಿ ಪತ್ರವನ್ನು ಅರ್ಜಿಯೊಂದಿಗೆ ನೀಡಬೇಕು. ದಾಳಿಯಾದ ಸ್ಥಳವನ್ನು ಪರಿಶೀಲಿಸಿ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಪರಿಹಾರವನ್ನು ನೀಡಲಾಗುವುದು ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ. ಸದಾನಂದ ಆಲಂಕಾರು