Advertisement

ಗ್ರಾಮೀಣರ ಮನ ಗೆದ್ದ ‘ಮನೆ ಮನೆ ಯಕ್ಷಗಾನ’

06:44 AM Feb 20, 2019 | |

ಆಲಂಕಾರು: ಯಕ್ಷಗಾನವನ್ನು ಗ್ರಾಮೀಣ ಜನತೆಯ ಮನೆ ಮನೆಗೂ ತಲುಪಿಸುವ ಕನ್ಯಾನದ ಸಂಚಾರಿ ಯಕ್ಷಗಾನ ಮೇಳ ತನ್ನ ‘ಮನೆ ಮನೆ ಯಕ್ಷಗಾನ’ ಆಭಿಯಾನದಡಿ ನಾಲ್ಕನೇ ವರ್ಷದ ತಿರುಗಾಟವನ್ನು ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ಆರಂಭಿಸಿದೆ.

Advertisement

ಪರಶುರಾಮ ಸೃಷ್ಟಿಯ ಈ ನೆಲದಲ್ಲಿ ಚಿಕ್ಕ ಮೇಳ (ಯಕ್ಷಗಾನ), ಕಂಗೀಲು ಕರಂಗೋಲು, ಸೋಣಂತ ಜೋಗಿ, ಆಟಿಕಳಂಜ, ಮದಿಮಾಯೆ ಮದಿಮಾಳ್‌, ಕನ್ಯಾಪು, ಚೆನ್ನು ಕುಣಿತ, ಗೌಡರ ಸಿದ್ದವೇಷ, ಬಾಳ್‌ ಸಾಂತು ಮೊದಲಾದ ಕಲಾ ಪ್ರಕಾರಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಈ ದಿನಗಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಮತ್ತೆ ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕನ್ಯಾನದ ಸಂಚಾರಿ ಯಕ್ಷಗಾನ ಮೇಳ ಮುಂದಾಗಿದೆ.

ಚಾವಡಿಯಲ್ಲಿ ಕುಣಿತ
ಕೆಲವು ವರ್ಷಗಳಿಂದ ಆರು ಅಥವಾ ಏಳು ಜನರ ಚಿಕ್ಕ ಮೇಳ ಕಾರ್ಯಾಚರಿಸುತ್ತಿತ್ತು. ಹೆಚ್ಚಿನ ಕಲಾವಿದರನ್ನು ಸೇರಿಸಿ, ಮೇಳದ ವೃತ್ತಿಪರತೆಯನ್ನು ವೃದ್ಧಿಸಲಾಗಿದೆ. ಹಿಂದೆ ಮನೆಗಳಲ್ಲಿ ದೋಷ ಪರಿಹಾರಾರ್ಥ ಚಿಕ್ಕಮೇಳವನ್ನು ಕರೆಯಿಸಿ ಆಡಿಸುತ್ತಿದ್ದರು. ಇಲ್ಲಿ ಯಕ್ಷಗಾನ ವೇಷಗಳು ಅಂಗಳದ ಬದಲು ಮನೆಯ ಚಾವಡಿಯಲ್ಲಿ ಕುಣಿಯುವ ಸಂಪ್ರದಾಯವಿದೆ. ಯಕ್ಷಗಾನ ಗೆಜ್ಜೆ ಸೇವೆಯ ವೇಳೆ ಹೊರಹೊಮ್ಮುವ ನಾದ ತರಂಗದಿಂದ ಮನೆ – ಮನದ ದೋಷಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆಯಿದೆ. ಧರ್ಮ ಪ್ರಸಾರ ಮತ್ತು ಪ್ರಚಾರಕ್ಕೆ ಯಕ್ಷಗಾನ ಮೂಲ ಬಿಂದುವಾಗಿದೆ ಎಂದು ಯಕ್ಷಗಾನದ ಹವ್ಯಾಸಿ ಭಾಗವತ ಆನಂದ ದೇವಾಡಿಗ ನಗ್ರಿ ಅವರು ತಿಳಿಸಿದರು.

ಮನೆಯವರಿಂದಲೇ ಆರತಿ
ಯಕ್ಷಗಾನ ತಂಡ ಮನೆಗೆ ಬಂದಾಗ ಮನೆಯವರು ಗಣಪತಿ ದೇವರಿಗೆ ಸ್ವಸ್ತಿಕವಿರಿಸಿ, ಹರಿವಾಣ ಮತ್ತು ಮಣೆಯೊಂದಿಗೆ ದೀಪ ಬೆಳಗಬೇಕು. ಹೊಸ ಮನೆ ಕಟ್ಟುವ ಸಂದರ್ಭ, ಕಂಕಣ ಭಾಗ್ಯ, ಸಂತಾನ ಭಾಗ್ಯದ ಕುರಿತು ತಂಡಕ್ಕೆ ಮುಂಚಿತವಾಗಿ ತಿಳಿಸಿದಲ್ಲಿ ದೇವಿಯ ಮುಂದೆ ಪ್ರಾರ್ಥಿಸುತ್ತಾರೆ. ಜಾತಿ-ಮತ ಭೇದವಿಲ್ಲದೆ ಮನೆಯವರೇ ಶ್ರೀದೇವಿಗೆ ಆರತಿ ಬೆಳಗಿಸಲು ಅವಕಾಶವಿದೆ. ಜನನ – ಮರಣದ ಸೂತಕವಿದ್ದಲ್ಲಿ ಮಾತ್ರ ದಿನಾಂಕ ಬದಲಿಸಿಕೊಳ್ಳಲು ಅವಕಾಶವಿದೆ.

ಉಚಿತ ತರಬೇತಿ
ಯಕ್ಷಗಾನದ ಆದಿ ಕವಿ ಪಾರ್ತಿಸುಬ್ಬನ ಗ್ರಂಥದಲ್ಲಿ ಮನೆ ಮನೆ ಯಕ್ಷಗಾನ ಮೂಲ ಪರಂಪರೆಯಿಂದ ಬಂದ ಪದ್ಧತಿಯೆಂದು ಉಲ್ಲೇಖೀತವಾಗಿದೆ. ಕಲಾ ಪ್ರಕಾರವನ್ನು ಉಳಿಸುವ ದೃಷ್ಟಿಯಿಂದ ಉಳ್ಳಾಲ್ತಿ ಅಮ್ಮನವರ ಹೆಸರಿನಲ್ಲಿ ಕಲಾ ಸೇವೆ ಮಾಡುತ್ತಿದ್ದೇವೆ. ನಮ್ಮ ತಂಡದ ನುರಿತ ಗುರುಗಳಿಂದ ಉಚಿತ ಯಕ್ಷಗಾನ, ನಾಟ್ಯ, ತರಬೇತಿ ನೀಡಲಾಗುತ್ತಿದೆ. ದೇವಸ್ಥಾನ, ಮಂದಿರಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಕಾರ, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರಿಗೆ ಸಹಕಾರ ನೀಡುತ್ತಾ ಜನರ ಗೌರವಕ್ಕೆ ಪಾತ್ರರಾಗಿದ್ದೇವೆ. ಶುಭ ಸಂದರ್ಭದಲ್ಲಿ ಸೀಮಿತ ಅವಧಿಯ ಯಕ್ಷಗಾನ, ತಾಳಮದ್ದಳೆ ನಮ್ಮ ತಂಡದ ವಿಶೇಷ.
ಜಗದೀಶ್‌ ಕನ್ಯಾನ, 
ಮೇಳದ ವ್ಯವಸ್ಥಾಪಕ

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next