ಆಲಂಕಾರು : ಬರಪೂರ ನೀರಿನ ಸೆಲೆಯಿರುವ ಐತಿಹಾಸಿಕ ಹಿನ್ನೆಲೆಯ ಕಡಬ ತಾಲೂಕಿನ ಕೊಯಿಲದ ನೆತ್ತೆರ್‌ಕೆರೆಯೊಂದು ಸಮರ್ಪಕ ನಿರ್ವಹಣೆಯಿಲ್ಲದೆ ಅವಸಾನದ ಅಂಚಿಗೆ ತಲುಪಿದೆ. ಈ ಕೆರೆಯನ್ನು ಪುನಶ್ಚೇತನಗೊಳಿಸಿ ಕೆರೆಯನ್ನು ಉಳಿಸಕೊಳ್ಳಬೇಕು ಎನ್ನುವುದು ಈ ಭಾಗದ ಜನರ ಒತ್ತಾಸೆಯಾಗಿದೆ.
ಕೊಯಿಲ ಜಾನುವಾರು ಸಂವರ್ದನ ಕೇಂದ್ರದ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಶುವೈದ್ಯಕೀಯ ಕಾಲೇಜಿನ ವ್ಯಾಪ್ತಿಯ ಜಾಗದಲ್ಲಿರುವ ನೆತ್ತೆರ್‌ಕೆರೆಯಲ್ಲಿ ವರ್ಷ ಪೂರ್ತಿ ಜೀವಜಲ ತುಂಬಿಕೊಂಡಿರುತ್ತದೆ. ಅರ್ಧ ಎಕ್ರೆಯಲ್ಲಿರುವ ಈ ಕೆರೆಯಲ್ಲಿ ಹಿಂದೆ ವರ್ಷ ಪೂರ್ತಿ ನೀರು ನಳನಳಿಸುತ್ತಿತ್ತು. ಬರಬರುತ್ತಾ ಕೆರೆ ಹೂಳು ತುಂಬಿಕೊಂಡು ಕಿರಿದಾಗತೊಡಗಿತು. ಹೀಗೆ ಮುಂದುವರಿದರೆ ಮುಂದೊಂದು ದಿನ ಈ ಭಾಗದಲ್ಲಿ ಕೆರೆಯಿತ್ತು ಎನ್ನುವುದು ನೆನಪಾಗಿ ಉಳಿಯುವ ಸಾಧ್ಯತೆ ಇದೆ. ಸರಕಾರ ಕೆರೆ ಅಭಿವೃದ್ದಿಗೆ ಮಹತ್ವವನ್ನು ನೀಡಿ ಅಭಿವೃದ್ಧಿಪಡಿಸಿದರೆ ಮತ್ತೆ ಮೂಲ ಸ್ವರೂಪ ಕಂಡುಕೊಳ್ಳಬಹುದು.
ಮಳೆಗಾಲದಲ್ಲಿ ಮಾತ್ರ ನೀರು ಶೇಖರಣೆಯಾಗುತ್ತಿದ್ದ ಜಾಗವನ್ನು ಸಂವರ್ಧನ ಕೇಂದ್ರದ ವತಿಯಿಂದ 1995ನೇ ಇಸವಿಯಲ್ಲಿ ಮಾನವ ಶ್ರಮದಿಂದ ಕೆರೆಯಾಗಿ ನಿರ್ಮಿಸಲಾಗಿತ್ತು. 2010ರಲ್ಲಿ ಈ ಕೆರೆಯನ್ನು ಪುನರ್ ನಿರ್ಮಾಣ ಮಾಡಲಾಗಿತ್ತು. ಈ ಕೆರೆ ಇರುವ ಜಾಗ ಪ್ರಸಕ್ತ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ಸುಪರ್ದಿಗೆ ಹಸ್ತಾಂತರವಾಗುವವರೆಗೂ ಸಂವರ್ಧನ ಕೇಂದ್ರದ ಉಪಯೋಗದಲ್ಲಿತ್ತು. ಕೆರೆಯ ನೀರನ್ನು ಸಂವರ್ಧನ ಕೇಂದ್ರದ ದನಗಳ ಆಹಾರಕ್ಕಾಗಿ ಬೆಳೆಯುತ್ತಿದ್ದ ಹುಲ್ಲುಗಾವಲಿಗೆ ಉಪಯೋಗಿಸಲಾಗುತ್ತಿತ್ತು. ಇದೀಗ ಕೆರೆಗೆ ಅಳವಡಿಸಿದ್ದ ಮೋಟರ್ ಪಂಪ್ ತೆರವುಗೊಳಿಸಲಾಗಿದೆ.
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎನ್ನುವಲ್ಲಿಂದ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾ ಗಣಪತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ದೇವಸ್ಥಾನದ ಬಳಿ ರಸ್ತೆಯ ಮಗ್ಗುಲಲ್ಲೆ ಈ ಕೆರೆಯಿದೆ. ಕೆರೆಗೆ ಸಮರ್ಪಕ ರಕ್ಷಣಾ ಬೇಲಿಯಿಲ್ಲದೆ ಅಪಾಯವನ್ನು ಆಹ್ವಾನಿಸುವಂತಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಆವಶ್ಯಕ.
ಮಳೆ ನೀರು ಕೆರೆಗೆ ಹರಿಯುತ್ತದೆ
ಕೆರೆಯ ಒಂದು ಭಾಗದಲ್ಲಿ ರಸ್ತೆ ಇದ್ದರೆ ಉಳಿದ ಭಾಗ ಎತ್ತರದ ಜಾಗವಾಗಿದೆ. ಹಾಗಾಗಿ ಮಳೆ ನೀರು ನೇರವಾಗಿ ಕೆರೆಗೆ ಸೇರುತ್ತದೆ. ಬಳಿಕ ಪಕ್ಕದ ತೋಡಿಗೆ ಹರಿಯುತ್ತದೆ. ಮಳೆ ನೀರಿನೊಂದಿಗೆ ಬಂದ ಮಣ್ಣು ಕೆರೆಯಲ್ಲಿ ಶೇಖರಣೆಯಾಗುತ್ತದೆ. ಹೂಳು ತುಂಬಿ ಕೆರೆ ಕಿರಿದಾಗುತ್ತಿದೆ. ಈ ಕೆರೆಯು ನೀರಿನ ಆಗರವಾಗಿದ್ದು, ಎಂದಿಗೂ ಬತ್ತುವುದಿಲ್ಲ. ಈ ನಿಟ್ಟಿನಲ್ಲಿ ನೆತ್ತೆರ್‌ಕೆರೆಯನ್ನು ಪುನಶ್ಚೇತನಗೊಳಿಸಿದರೆ ಅಂತರ್ಜಲ ಮಟ್ಟವೂ ಏರಿಕೆಯಾಗುತ್ತದೆ.
ತಡೆಗೋಡೆ ಅಗತ್ಯ
ವರ್ಷ ಪೂರ್ತಿ ನೀರು ತುಂಬಿಕೊಂಡಿರುವ ಈ ಕೆರೆಯಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಎಮ್ಮೆಗಳು ಬೇಸಗೆ ಕಾಲದಲ್ಲಿ ಕೆರೆಯ ನೀರಿನಲ್ಲಿ ದಣಿವಾರಿಸಿಕೊಳ್ಳುತ್ತವೆ. ಕೆರೆಯ ತಳಭಾಗದಲ್ಲಿ ಹೂಳು ತುಂಬಿಕೊಂಡಿರುವ ಕಾರಣ ನೀರು ಕೆಸರುಮಯವಾಗುತ್ತದೆ. ಈ ನಿಟ್ಟಿನಲ್ಲಿ ಕೆರೆಗೆ ಆವರಣಗೋಡೆ ಆವಶ್ಯಕ ಎನ್ನುವುದು ಸ್ಥಳೀಯರ ಆಗ್ರಹ.
ಅಗತ್ಯ ಕ್ರಮ ವಹಿಸಿ
ನೆತ್ತೆರ್ ಕೆರೆಗೂ ಶ್ರೀ ಸದಾಶಿವ ಮಹಾಗಣಪತಿ ದೇಗುಲಕ್ಕೂ ಸಂಬಂಧವಿದೆ ಎನ್ನುವ ಐತಿಹ್ಯವಿದೆ. ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಮತ್ತು ಪ್ರಸಕ್ತ ಕಾಲಘಟ್ಟದ ನೀರಿನ ಅಭಾವವನ್ನು ನೀಗಿಸಲು ಈ ಕೆರೆಯನ್ನು ಉಳಿಸಿಕೊಳ್ಳಲು ಸಂಬಂಧಪಟ್ಟವರು ಅಗತ್ಯ
ಕ್ರಮಗಳನ್ನು ವಹಿಸಬೇಕು.
– ಯದುಶ್ರೀ ಆನೆಗುಂಡಿ
ಶಿಕ್ಷಕರು
ಕೆರೆಯ ಇತಿಹಾಸ
ಈ ಕೆರೆಗೂ ಪಕ್ಕದ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೂ ಸಂಬಂಧವಿದೆ. ಈ ಕೆರೆ ನಿರ್ಮಾಣಕ್ಕೂ ಮುನ್ನ ಇಲ್ಲಿ ಬೃಹದಾಕಾರದ ಕೆರೆ ಇತ್ತು. ಕಾಲಾನಂತರ ಮಣ್ಣಿನಿಂದ ಕೆರೆ ಮುಚ್ಚಿ ಹೋಯಿತು. ಆದರೂ ವರ್ಷ ಪೂರ್ತಿ ಈ ಜಾಗದಲ್ಲಿ ನೀರಿನ ತೇವವಿತ್ತು. ಹಿರಿಯರು ಕೆರೆ ನಿರ್ಮಿಸುವ ಸಂದರ್ಭ ಶಿವನ ಮೂರ್ತಿ ಇಲ್ಲಿ ಸಿಕ್ಕಿತ್ತು. ಕೆರೆ ನಿರ್ಮಾಣಕ್ಕೆ ಬಳಸುವ ಹಾರೆ ಈ ಶಿವನ ಮೂರ್ತಿಗೆ ತಾಗಿ ರಕ್ತ ಚೆಲ್ಲಿತ್ತು. ಆದ್ದರಿಂದ ಈ ಕೆರೆಗೆ ನೆತ್ತೆರ್ (ತುಳುವಿನಲ್ಲಿ ರಕ್ತಕ್ಕೆ ನೆತ್ತೆರ್ ಎನ್ನುತ್ತಾರೆ) ಕೆರೆ ಎನ್ನುವ ಹೆಸರು ಬಂದಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಸದಾನಂದ ಆಲಂಕಾರು