Advertisement

ಕೊಯಿಲದ ಯುವಕ ವಿದೇಶದಲ್ಲಿ ಆತ್ಮಹತ್ಯೆ: ಎಂಟು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು

01:05 AM May 30, 2023 | Team Udayavani |

ಆಲಂಕಾರು: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕ ರವಿವಾರ ವಿದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ| ಮೋನಪ್ಪ ಪೂಜಾರಿ ಅವರ ಪುತ್ರ ಅವಿವಾಹಿತ ಸಂದೇಶ್‌ (32)ಮೃತರು. ಅವರು ಕೊಲ್ಲಿ ರಾಷ್ಟ್ರದ‌ ಒಮನ್‌ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪೆ‌ನಿಯೊಂದರಲ್ಲಿ ಲೈನ್‌ಸೇಲ್‌ ಉದ್ಯೋಗ ಮಾಡುತ್ತಿದ್ದರು. ಇವರ ಸಹೋದರ ಸಂತೋಷ್‌ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು, ಒಂದೇ ಕೊಠಡಿಯಲ್ಲಿ ವಾಸ ವಾಗಿದ್ದರು.
ಇವರ ಸಂಬಂಧಿ ಯುವಕ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್‌ ಕೂಡಾ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು, ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದರು. ಸಂದೇಶ್‌ ಅವರು ಬೇಗನೆ ಕರ್ತವ್ಯ ಮುಗಿಸಿ ಕೊಠಡಿಗೆ ಆಗಮಿಸಿ ಮಧ್ಯಾಹ್ನದ ಒಳಗೆ ಸುಮಾರು 10.30ರ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಕೆಲವೇ ಹೊತ್ತಿನ ಬಳಿಕ ಚರಣ್‌ ಅವರು ಸಂದೇಶ್‌ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಮುಚ್ಚಿತ್ತು. ಕದ ತಟ್ಟಿದರೆ ಯಾವುದೇ ಉತ್ತರ ಬಾರದೆ ಹೋದಾಗ ಸಂಶಯಗೊಂಡು ಗಾಬರಿಯಿಂದ ಸಂದೇಶ್‌ ಸಹೋದರ ಸಂತೋಷ್‌ಗೆ ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ.

ಕೊಠಡಿಯ ಒಂದು ಕೀ ಸಂತೋಷ್‌ ಅವರಲ್ಲಿ ಇದ್ದುದರಿಂದ ಬಾಗಿಲು ತೆರೆದು ನೋಡುವಾಗ ಕೊಠಡಿಯ ಒಳಗಿನ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂದೇಶ್‌ ಕಂಡುಬಂದಿದ್ದಾರೆ. ಆ ದೇಶದ ನಿಯಮಾಳಿಗಳ ಪ್ರಕಾರ ಮರಣೋತ್ತರ ಪರೀಕ್ಷೆಗಳ ಪ್ರಕ್ರಿಯೆ ಮುಗಿದು ಮಂಗಳವಾರ ಅಥವಾ ಬುಧವಾರ ಮೃತದೇಹ ಊರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ.

ಎಂಟು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು
ಸಂದೇಶ್‌‌ ಸಹೋದರ ಸಂತೋಷ್‌ ಏಳು ವರ್ಷಗಳ ಹಿಂದೆ ಮಸ್ಕತ್‌ಗೆ ಉದ್ಯೋಗಕ್ಕೆ ತೆರಳಿದ್ದರು. ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನೈನ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆರಂಭದಲ್ಲಿ ವಿಸಿಟಿಂಗ್‌ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್‌, ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿರಿಯಿಲ್ಲದ ಉದ್ಯೋಗ ಇದ್ದು, ಯಾವುದೇ ಸಮಸ್ಯೆಗಳು ಇರಲಿಲ್ಲ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಅಣ್ಣ ತಮ್ಮ ಸಂತೋಷವಾಗಿಯೇ ಇದ್ದರು. ಕೇವಲ ಒಂದು ಲೈನ್‌ ಸಾರಿ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next