ಆಳಂದ: ಪ್ರತಿ ಕೆಜಿ ಸಕ್ಕರಿ 50 ರೂ., ಬೆಲ್ಲ 80 ರೂ., ಚಹಾಪತ್ತಿ 30 ರೂ., ಉಂಬಾಎಣ್ಣಿ 130 ರೂ., ಮತ್ತು 25 ರೂಗೆ ಒಂದು ಟೆಂಗಿನಕಾಯಿ, 15ರೂ. ಒಂದು ಪಾಕೀಟ್ ಉಪ್ಪು ಮಾರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಬದುಕುವುದಾದರು ಹೇಗೆ ಎಂಬ ಮಾತುಗಳು ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಕೇಳಿ ಬರುತ್ತಿವೆ.
ಕೋವಿಡ್ ವೈರಸ್ ಭೀತಿಯಿಂದ ಜನ ಕಂಗಾಲಾಗಿದ್ದಾರೆ. ಕೆಲಸ ಇಲ್ಲದೇ ಖಾಲಿ ಕುಳಿತ್ತಿದ್ದೇವೆ. ದಿನಸಿ ಬೆಲೆಯಿಂದಾಗಿ ಕಂಗಾಲಾಗಿದ್ದೇವೆ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ಆಳಂದ ತಾಲೂಕಿನ ಖಜೂರಿ, ಮಾದನಹಿಪ್ಪರಗಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ದುಬಾರಿ ದರದಲ್ಲಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾನವೀಯ ನೆಲೆಯಲ್ಲಿ ನಡೆದುಕೊಳ್ಳಬೇಕಾದ ಅಂಗಡಿ ಮಾಲೀಕರು ಇಂತಹ ಸಂಕಷ್ಟ ಸಂದರ್ಭದಲ್ಲಿಯೂ ವ್ಯಾಪಾರಿಗಳ ವರ್ತಿಸುತ್ತಿದ್ದಾರೆ ಎಂದು ದೂರದ್ದಾರೆ.
ಇಂತಹ ಸಂದರ್ಭದಲ್ಲಿ ಅನಧಿಕೃತವಾಗಿ ಬೆಲೆ ಹೆಚ್ಚಿಸಿದರೆ ಬದುಕುವುದಾರು ಹೇಗೆ? ದಿನದಿಂದ ದಿನಕ್ಕ ಬೇರೆ ದರ ನಿಗದಿ ಮಾಡುತ್ತಿದ್ದಾರೆ. ಸರ್ಕಾರದವರೇ ಯಾವುದಾದರು ಒಂದು ಸ್ಥಳದಲ್ಲಿ ಕಿರಾಣಿ ಸಾಮಗ್ರಿ ಸಿಗುವಂತೆ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ.
ಶ್ರೀಶೈಲ ಭೀಮಪೂರೆ,
ಖಜೂರಿ ಗ್ರಾಮಸ್ಥ
ದುಬಾರಿ ಬೆಲೆಯಲ್ಲಿ ದಿನಸಿ ಸಾಮಗ್ರಿ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವ್ಯಾಪಾರಿಗಳ ಸಭೆ ಕರೆದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈ ಕುರಿತು ಅಧಿಕಾರಿಗಳನ್ನು ಕಳುಹಿಸಿ ತಪ್ಪಿತಸ್ಥರು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ದಯಾನಂದ ಪಾಟೀಲ,
ತಹಶೀಲ್ದಾರ್