ಆಳಂದ: ಗ್ರಾಮೀಣ ಭಾಗದಲ್ಲಿ ನೀರಿನ ಭೀಕರ ಸಮಸ್ಯೆ ತಲೆದೋರಿದ್ದು, ಕಾಲಹರಣ ಮಾಡದೆ ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸಲು ಮುಂದಾಗದೇ ಇದ್ದಲ್ಲಿ ಜನ ಧಂಗೆಯೆದ್ದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಸುಭಾಷ ಗುತ್ತೇದಾರ ಎಚ್ಚರಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಕರೆದ ನೀರು ನಿರ್ವಾಹಣ ಸಮಿತಿ (ಕೆಆರ್‌ಸಿಟಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್ ನೀರು ಪೂರೈಕೆ ಇರುವೆಡೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಿ. ಅಲ್ಲದೆ, ಅಗತ್ಯವಿರುವ ಹಳ್ಳಿ ಮತ್ತು ತಾಂಡಾಗಳಿಗೆ ಅಧಿಕಾರಿಗಳು ಭೇಟಿ ನೀಡಿ ಟ್ಯಾಂಕರ್ ನೀರು ಒದಗಿಸಬೇಕು ಎಂದರು.
ಮಳೆ ಬಾರದಿರುವುದರಿಂದ ಅಂತರ್ಜಲಮಟ್ಟ ಕುಸಿದು ನೀರಿನ ಮೂಲವೇ ಬತ್ತಿಹೋಗಿವೆ. ಇದರಿಂದ ಜನ ಜಾನುವಾರು ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ಎದುರಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಕದಲದೆ ತುರ್ತು ನಿರ್ವಹಣೆ ಕಾರ್ಯ ಹಾಗೂ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸಬೇಕು ಎಂದರು.
ಕುಡಿಯುವ ನೀರಿಗಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಈ ಮಧ್ಯೆ ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಅವರು ಖಜೂರಿ ಮತ್ತು ಆಳಂದನಲ್ಲಿ ಮೇವು ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಯಾವಾಗ ಮೇವು ಕೇಂದ್ರ ಪ್ರಾರಂಭಿಸಲಾಗಿದೆ. ಪತ್ರಿಕೆಯಲ್ಲಿ ಈ ಕುರಿತು ಯಾಕೆ ಮಾಹಿತಿ ನೀಡಿಲ್ಲ. ತಾಲೂಕಿನ ಐದು ಹೋಬಳಿಯಲ್ಲೂ ಮೇವು ಕೇಂದ್ರ ಪ್ರಾರಂಭಿಸಿ, ಪಶು ಪಾಲಕರಿಗೆ ಮೇವು ಒದಗಿಸಬೇಕು ಎಂದು ಆದೇಶಿಸಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಸಂಗಮೇಶ ಬಿರಾದಾರ ಮಾತನಾಡಿ, ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಕೆಲವಡೆ ಪೈಪಲೈನ್ ಕೈಗೊಳ್ಳಲಾಗಿದೆ. ತೀವ್ರ ಸಮಸ್ಯೆ ಅರಿತು ಅನುಮತಿ ಇಲ್ಲದೆ ಕೆಲವು ಕಡೆ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸೇರಿ ಟ್ಯಾಂಕರ್ ನೀರು ಒದಗಿಸಿದ್ದಾರೆ. ಅನುಮತಿ ಇಲ್ಲದ್ದಕ್ಕೆ ಬಿಲ್ ಪಾವತಿಗೆ ತೊಂದರೆ ಆಗುತ್ತದೆ. ಅನುಮತಿ ಇಲ್ಲದೆ ಟ್ಯಾಂಕರ್ ಬಳಸಿದ್ದಲ್ಲಿ ಗ್ರಾಪಂನಿಂದ ಬಿಲ್ ಪಾವತಿಸಲು ಅವಕಾಶವಿದೆ ಎಂದಾಗ ಮಧ್ಯ ಪ್ರವೇಶಿಸಿದ ಶಾಸಕರು ಅನುದಾನ ಕೊರತೆಯಲ್ಲಿರುವ ಗ್ರಾಪಂಗೆ ಟ್ಯಾಂಕರ್ ಬಿಲ್ ಪಾವತಿಸುವುದು ಅಸಾಧ್ಯವಾಗಿದೆ. ಜಿಪಂನಿಂದಲೇ ಹಣ ಒದಗಿಸಬೇಕು ಎಂದು ಮೊಬೈಲ್ ಮೂಲಕ ಜಿಪಂ ಅಧಿಕಾರಿಗಳಿಗೆ ಗಮನಕ್ಕೆ ತಂದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಮಾತನಾಡಿ, ಜಾನುವಾರುಗಳಿಗೆ ನೀರು, ಮೇವಿನ ಕುರಿತು ಮತ್ತು ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮೊಹ್ಮದ್ ಸಲೀಂ ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ, ಸದಸ್ಯರಾದ ಹರ್ಷಾನಂದ ಗುತ್ತೇದಾರ, ಸಿದ್ಧರಾಮ ಪ್ಯಾಟಿ, ಗುರುಶಾಂತ ಪಾಟೀಲ, ಶರಣಗೌಡ ಪಾಟೀಲ, ವಿಜಯಲಕ್ಷ್ಮೀ ರಾಗಿ, ತೈನಿನ ಬೇಗಂ, ಮುಖಂಡ ಮಲ್ಲಣ್ಣಾ ನಾಗೂರೆ ತಮ್ಮ ಕ್ಷೇತ್ರಗಳಲ್ಲಿನ ನೀರಿನ ಸಮಸ್ಯೆಗೆ ಅಗತ್ಯ ಕ್ರಮಕ್ಕೆ ಕೋರಿದರು.
ತಾಪಂ ಇಒ ಅನಿತಾ ಕೊಂಡಾಪುರ, ಮಾದನಹಿಪ್ಪರಗಾ ಪಿಡಿಒ ಬಾಬುಗೌಡ ಪಾಟೀಲ, ಶಿವಶಣಪ್ಪ ಬೋಟೆ, ಮಂಜುರ ಪಟೇಲ, ಗ್ರಾಪಂ ಅಧ್ಯಕ್ಷ ಸಿದ್ಧಾರೂಢ ಬುಜುರ್ಕೆ, ಭೀಮಾಶಂಕರ ಖಂಡಾಳೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಆಯ್ದ ಅಧ್ಯಕ್ಷರು ಹಾಜರಿದ್ದರು.