ಆಳಂದ: ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕೃಷಿ ಹಾಗೂ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಾರ್ಯ ಮತ್ತು ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕೈಗೊಳ್ಳಲು ಆಗ್ರಹಿಸಿ ಅಖೀಲ ಭಾರತ ಕಿಸಾನ್ ಸಭಾ ಮತ್ತು ಭಾರತೀಯ ಖೇತ ಮಜ್ದೂರ ಮತ್ತು ಕಟ್ಟಡ ಕಾರ್ಮಿಕರ ಯುನಿಯನ್ ಕಾರ್ಯಕರ್ತರು ತಾಲೂಕಿನ 9 ಗ್ರಾಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಖಜೂರಿ ವಲಯದ ಆಳಂಗಾ, ಹೋದಲೂರ, ಖಜೂರಿ, ರುದ್ರವಾಡಿ, ತಡೋಳಾ, ಹೆಬಳಿ ಪಡಸಾವಳಿ, ಸರಸಂಬಾ ಮತ್ತು ಹಿರೋಳಿ ಗ್ರಾಪಂ ಕಚೇರಿ ಎದುರು ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಯಿತು.
ಆಳಂಗಾ ಗ್ರಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಬೇಡಿಕೆ ಈಡೇರುವ ತನಕ್ಕೆ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ. ಹೋರಾಟಕ್ಕೆ ದುಡಿಯವ ಮತ್ತು ರೈತ ವರ್ಗ ಬೆಂಬಲಿಸಿ ಭಾಗವಹಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಕಾಮಗಾರಿಗಳ ನಿಜವಾದ ಅರ್ಥದಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕು. ಉದ್ಯೋಗ ಖಾತ್ರಿ ಹಣ ಸದ್ಭಳಕೆ ಮಾಡಿ ಭವಿಷ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಮೊದಲ ಹಂತದಲ್ಲಿ ಬದು ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. 2ನೇ ಹಂತದಲ್ಲಿ ಗೋಕಟ್ಟೆ ಕೈಗೊಳ್ಳಬೇಕು. ಎಚ್ಕೆಡಿಪಿ ಹಣವನ್ನು ಟೆಬಲ್ ಟೆನಿಸ್ ಮುಂತಾದ ಕೆಲಸಕ್ಕೆ ಖರ್ಚಾದರೆ ಸಾಲದು, ಇದರಿಂದ ಆದಷ್ಟು ಕೆರೆಗಳು ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಆಳಂಗಾ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾರುತಿ ಕಾಂಬಳೆ, ತಡೋಳಾ ಗ್ರಾಮದಲ್ಲಿ ಪಾಂಡುರಂಗ ಶಿಂಧೆ, ಕಲ್ಯಾಣಿ ಅವುಟೆ, ಮೈಲಾರಿ ಜೋಗೆ, ಮಾವೀರ ಕಾಂಬಳೆ ಇನ್ನಿತರರು ಪಾಲ್ಗೊಂಡಿದ್ದರು. ಪಡಸಾವಳಿ ಗ್ರಾಮದಲ್ಲಿ ವಿಶ್ವನಾಥ ಜಮಾದಾರ, ಸರಸಂಬಾ ಗ್ರಾಮದಲ್ಲಿ ಲಕ್ಷ್ತ್ರೀಂಬಾಯಿ, ರಾಜಶೇಖರ ಬಸ್ಮೆ, ಗುಂಡು ಹಿರೋಳಿ, ಹೋದಲೂರ ಗ್ರಾಮದಲ್ಲಿ ಸಾಯಬಣ್ಣಾ ಪೂಜಾರಿ, ರುದ್ರವಾಡಿ ಗ್ರಾಮದಲ್ಲಿ ಚಂದ್ರಕಾಂತ ಖೋಬ್ರೆ, ಶ್ರೀಮಂತ ವಗ್ಗೆ ಆಶಾಕ್ ಮುಲ್ಲಾ. ಖಜೂರಿ ಗ್ರಾಮದಲ್ಲಿ ರಫಿಕ್ ನಿಂಬಾಳಕರ್, ರಾಜಶೇಖರ ಶಿವಮೂರ್ತಿ ದತ್ತಾತ್ರೆಯ ಕಬಾಡೆ ಮತ್ತು ಹೆಬಳಿಯಲ್ಲಿ ಭಾಷಾ ಮುಲ್ಲಾ, ಚಂದ್ರಶೇಖರ ಶೇರಿಕಾರ, ಪ್ರಭು ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.