Advertisement

ಲಾಕ್‌ಡೌನ್‌: ಕೃಷಿ ಚಟುವಟಿಕೆಗೆ ಸಡಿಲಿಕೆ

04:11 PM Apr 30, 2020 | Naveen |

ಆಳಂದ: ರೈತರ ಉತ್ಪನ್ನ ಮಾರಲು, ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಲಾಕ್‌ಡೌನ್‌ ಸಮಯದಲ್ಲಿನ ಕೆಲ ನಿರ್ಬಂಧನೆಗಳಿಗೆ ವಿನಾಯಿತಿ ನೀಡಿದ್ದರಿಂದ ಪಟ್ಟಣದಲ್ಲಿ ಆಟೋ, ಕಾರು, ದ್ವಿಚಕ್ರವಾಹನಗಳ ಸಂಚಾರ ಕಂಡುಬರುತ್ತಿದೆ.

Advertisement

ಬಹುತೇಕ ರೈತರು, ಕೃಷಿ ಕೂಲಿ ಕಾರ್ಮಿಕರು ಖಾಸಗಿ ವಾಹನಗಳ ಮೂಲಕ ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳಿಗಾಗಿ ಸಂಚರಿಸಿದರು. ತಾಲೂಕು ಆಡಳಿತ ಇದಕ್ಕೆ ಸಂಬಂಧಿಸಿದಂತೆ ಪಾಸ್‌ಗಳ ವ್ಯವಸ್ಥೆ ಮಾಡಿದೆ. ಕೆಲವು ಗ್ರಾಮಗಳಲ್ಲಿ ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ಕಂಟಿ ಒಡ್ಡಿದ್ದರಿಂದ ಅಗತ್ಯ ಕೆಲಸಗಳಿಗೆ ಸಂಚರಿಸುವವರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಬ್ಯಾಂಕ್‌, ದಿನಸಿ ಖರೀದಿ, ಕೃಷಿ ಕಾರ್ಯಕ್ಕೆ ಸಂಬಂಧಿತ ಕೆಲಸಗಳಿಗೆ ಮುಕ್ತ ಅವಕಾಶ ಕೊಟ್ಟಿದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಳಗಿನ ಹೊತ್ತಿನಲ್ಲಿ ಮಾತ್ರ ಕಿರಾಣಿ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಬೆಳಗಿನ ಜಾವ ಏಕಕಾಲಕ್ಕೆ ಹೊರಬರುತ್ತಿದ್ದಾರೆ. ಅಲ್ಲದೇ ಕೆಲವು ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂರೇ, ಇನ್ನು ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ಈ ನಡುವೆ ಸರ್ಕಾರ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೊಸದೊಂದು ಕಾರ್ಯಚರಣೆಗೆ ಮುಂದಾಗಿದೆ. ಪ್ರತಿ ಮನೆ, ಮನೆಗೆ ಭೇಟಿ ನೀಡಿ 60 ವರ್ಷದ ಒಳಗಿನವರು ಮತ್ತು ನಂತರದವರ ಆರೋಗ್ಯ ಮಾಹಿತಿ ಕಲೆಹಾಕಲು ಮುಂದಾಗಿದೆ.

ಒಂದೊಮ್ಮೆ ಲಾಕ್‌ ಡೌನ್‌ನಲ್ಲಿ ಏರುಪೇರಾದರೂ ಜನರ ಮೇಲೆ ವೈರಸ್‌ನ ಯಾವುದೇ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಲು ಆರೋಗ್ಯದ ಮಾಹಿತಿ ಕಲೆಹಾಕಲು ಆರೋಗ್ಯ ತಂಡ ಮನೆ-ಮನೆಗೆ ಭೇಟಿ ನೀಡಲಿದೆ. ಈ ನಿಟ್ಟಿನಲ್ಲಿ ಬುಧವಾರ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಕರೆದ ಆರೋಗ್ಯ ಮತ್ತು ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ತಹಶೀಲಾರ್‌ ದಯಾನಂದ
ಪಾಟೀಲ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ ಅವರು ಜಂಟಿಯಾಗಿ ಜನರ ಆರೋಗ್ಯ ತಪಾಸಣೆ ಕಾರ್ಯಾಚರಣೆಗೆ ಸೂಚಿಸಿದ್ದಾರೆ.

ವಾರ್ಡ್‌ಗಳ ಮತಗಟ್ಟೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಜಂಟಿಯಾಗಿ ಗುರುವಾರದಿಂದ ಪ್ರತಿ ಮನೆಗೂ ಭೇಟಿ ನೀಡಿ ಪ್ರತಿಯೊಬ್ಬ ಸದಸ್ಯರ ಆರೋಗ್ಯದ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next