Advertisement

ಛಲದಂಕಮಲ್ಲ ಅಂಬಾದಾಸ್‌ ಈಗ ಸಹಾಯಕ ಆಯುಕ್ತ

08:03 PM Jan 01, 2020 | Naveen |

ಮಹಾದೇವ ವಡಗಾಂವ
ಆಳಂದ
: ಕಿತ್ತು ತಿನ್ನುವ ಬಡತನ, ಕೂಸಿದ್ದಾಗಲೇ ಅಗಲಿದ ತಂದೆ, ಕೂಲಿ ಮಾಡಿ ಶಿಕ್ಷಣ ನೀಡಿದ ತಾಯಿ ಮತ್ತು ಅಣ್ಣನ ಆಶ್ರಯದಲ್ಲೇ ಕೂಲಿ ಮಾಡುತ್ತಲೇ ಶಿಕ್ಷಣ ಕಲಿತ ದಲಿತ ಕುಟುಂಬದ ಯುವಕನೊಬ್ಬ ಕೆಪಿಎಸ್‌ಸಿ ನಡೆಸುವ ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ.

Advertisement

ತಾಲೂಕಿನ ಗಡಿ ಗ್ರಾಮವಾದ ಕೋತನಹಿಪ್ಪರಗಾದ ಅಣ್ಣಪ್ಪ-ಚಂದಮ್ಮ ಕಾಂಬಳೆ ದಂಪತಿಗೆ ಮೂವರು ಪುತ್ರರು, ಮೂವರು ಪುತ್ರಿಯರು. ಈ ಪೈಕಿ ಐದನೇಯವರೇ ಅಂಬಾದಾಸ ಕಾಂಬಳೆ. ಅಂಬಾದಾಸ ಅವರಿಗೆ ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ.
ಸಂಸಾರದ ನೊಗ ಹೊತ್ತು ಉನ್ನತ ಸಾಧನೆ ಮಾಡಿದ್ದು ಶ್ಲಾಘನೀಯವಾಗಿದೆ.

ಅಂಬಾದಾಸ ಅವರ ತಾಯಿ ಕಳೆದ ಎಂಟು ವರ್ಷಗಳ ಹಿಂದೆಯೇ ಮರಣ ಹೊಂದಿದ್ದಾರೆ. ಬದುಕಿನುದ್ದಕ್ಕೂ ಅನುಭವಿಸಿದ ನೋವು, ಯಾತನೆ, ಬಡತನ ಹೀಗೆ ಇವೆಲ್ಲವೂ ಒಂದೆಡೆಯಾದರೇ, ಇನ್ನೊಂದೆಡೆ ಇವೆಲ್ಲವನ್ನು ಮರೆಸುವಂತೆ ಮಾಡಿದ್ದು ಸಾಧನೆ.

ಶಿಕ್ಷಣದ ಹಾದಿ: ಅಂಬಾದಾಸ್‌ ಕಾಂಬಳೆ ಅವರು  ಶೇಷಚೇತನಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮ ಕೋತನಹಿಪ್ಪರಗಾದಲ್ಲೇ ಮುಗಿಸಿ, ಪ್ರೌಢಶಿಕ್ಷಣವನ್ನು ನೆರೆಯ ತಡಕಲ್‌ ಗ್ರಾಮದ ಶಿವಲಿಂಗೇಶ್ವರ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಓದಿ, ಪಿಯುಸಿಯನ್ನು ಕಲಬುರಗಿಯ ಇಂಡಿಪೆಂಡೆಂಟ್‌ ಪಿಯು ಕಾಲೇಜಿನಲ್ಲಿ, ಪದವಿಯನ್ನು ಡಾ| ಅಂಬೇಡ್ಕರ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಗುಲ್ಬರ್ಗಾ ವಿವಿಯಲ್ಲಿ ಬಿಇಡಿ, ಎಂ.ಎ ಕನ್ನಡ, ಎಂಫಿಲ್‌ ಮುಗಿಸಿ ಸದ್ಯ ಪಿಎಚ್‌ಡಿ ಕೈಗೊಂಡಿದ್ದಾರೆ.

ಡ್ರಾಪೌಟ್‌ ವಿದ್ಯಾರ್ಥಿ: ಬಡತನದಿಂದಾಗಿ ಏಳನೇ ತರಗತಿಯಲ್ಲೇ ಓದುವುದನ್ನು ನಿಲ್ಲಿಸಿದ್ದ ಅಂಬಾದಾಸ್‌ ಬಾಲ್ಯದಲ್ಲೇ ತುತ್ತಿನ ಚೀಲ ತುಂಬಿಕೊಳ್ಳಲು ಕೂಲಿ ಕೆಲಸಕ್ಕೆ ಹೋಗಿದ್ದರು. ಶಿಕ್ಷಣ ಕಲಿಯಬೇಕೆಂಬ ಬಯಕೆಯಿಂದ ಮರಳಿ ಶಾಲೆಗೆ ಬಂದು ಓದು ಮುಂದುವರಿಸಿದರು. ಮುಂದೆ ಪಿಯುಸಿ ಅನುತ್ತೀರ್ಣವಾದಾಗ ವಾಣಿಜ್ಯ ನಗರಿ ಮುಂಬೈಗೆ ಕೂಲಿ ಕೆಲಸಕ್ಕೆ ಹೋಗಿ, ಅಲ್ಲಿನ ಅಧಿಕಾರಿಗಳನ್ನು ನೋಡಿ ನಾನು ಈ ಅ ಧಿಕಾರಿಗಳಂತೆ ಆಗಬೇಕು ಎನ್ನುವ ಛಲತೊಟ್ಟು, ಮರಳಿ ಬಂದು ಕಾಲೇಜು ಓದು ಮುಂದುವರಿಸಿದ ಫಲವೇ ಸಾಧನೆಗೆ ದಾರಿಮಾಡಿಕೊಟ್ಟಿದೆ. ನಾಲ್ಕು ಹುದ್ದೆ: ಸಾಧಕ ಕಾಂಬಳೆ ತಾಲೂಕಿನ ತಡಕಲ್‌ ಮೊರಾರ್ಜಿ ದೇಸಾಯಿ ವಸತಿ ನಿಲಯ ವಾರ್ಡ್‌ನ್‌, ಎಸ್ಸಿ, ಎಸ್ಟಿ ವಸತಿ ನಿಲಯ ವಾರ್ಡ್‌ನ್‌, ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆ ಒಲಿದು ಬಂದಿದ್ದವು. ವಾರ್ಡ್‌ನ್‌ ಹುದ್ದೆ ತಿರಸ್ಕರಿಸಿದ್ದ ಅಂಬಾದಾಸ್‌ ಉಪನ್ಯಾಸಕ ಹುದ್ದೆಗೆ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿಸಿದ್ದರು.

Advertisement

ಕೆಎಎಸ್‌ ಪರೀಕ್ಷೆ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಸಹಕರಿಸಿದವರ ನೆನಪು: ಕಷ್ಟದಿಂದ ಶಿಕ್ಷಣ ಕಲಿತು ಎಂಫಿಲ್‌ ವೇಳೆ ಆರ್ಥಿಕ ಸಂಕಷ್ಟದಲ್ಲಿದ್ದೆ. ಅದೇ ತಾನೆ ತಾಯಿ ಮರಣ ಹೊಂದಿದ್ದರು. ಹೀಗಾಗಿ ಎಂಫಿಎಲ್‌ ಓದನ್ನೇ ಕೈಬಿಟ್ಟು ಮನೆಯಲ್ಲೇ ಕುಳಿತಿದ್ದಾಗ ಕಲಬುರಗಿ ವಿವಿ ಕನ್ನಡ ವಿಭಾಗದ ಡೀನ್‌ ಪ್ರೊ| ಎಚ್‌.ಟಿ. ಪೋತೆ ಅವರು ಕರೆದು ನೀಡಿದ ಮಾರ್ಗದರ್ಶನ, ಸಹಾಯದಿಂದ ಪಿಎಚ್‌ಡಿ ಅಧ್ಯಯನ ಮುಂದುವರಿಸಿದ್ದೆ. ಅಣ್ಣ ಶ್ರೀಶೈಲ ಗೌಂಡಿ ಕೆಲಸಗಾರ, ತಮ್ಮ ಮಲ್ಲಿಕಾರ್ಜುನ ಕಾಂಬಳೆ ಕೂಲಿ ಕೆಲಸ ಮಾಡುತ್ತಾನೆ. ಸಹೋದರ ಸಂಬಂಧಿ ಪ್ರಕಾಶ ಮೂಲಭಾರತಿ, ದಿಲೀಪ ಕ್ಷೀರಸಾಗರ ಇವರ ಸಹಾಯ ಹಾಗೂ ಮಾರ್ಗದರ್ಶನವೇ ನನ್ನ ಸಾಧನೆಗೆ ಸ್ಫೂರ್ತಿಯಾಗಿದೆ. ಜತೆಗೆ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಂಡಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next