ಆಳಂದ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಅಪರೂಪ ಎನ್ನುವಂತೆ ತಾಲೂಕಿನ ಸಾಲೇಗಾಂವ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯ ಶಾಲೆ ಎನ್ನಿಸಿಕೊಳ್ಳುತ್ತಿದೆ.
Advertisement
ಕುಗ್ರಾಮವಾದರೂ ಶೈಕ್ಷಣಿಕ ವಾತಾವರಣ ಬೆಳೆದ ಹಿನ್ನೆಲೆಯಲ್ಲಿ ಇದುವರೆಗೂ ಗ್ರಾಮಸ್ಥರು 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ವೇದಿಕೆ ನಿರ್ಮಾಣ, 20 ಸಾವಿರ ರೂ. ವೆಚ್ಚದಲ್ಲಿ ಗಣಕ ಯಂತ್ರ, 10 ಸಾವಿರ ರೂ. ವೆಚ್ಚದಲ್ಲಿ ಪ್ರೊಜೆಕ್ಟರ್, ಮೂರು ಸಾವಿರ ವೆಚ್ಚದಲ್ಲಿ 65 ಊಟದ ತಟ್ಟೆ, ನೀರು ಸಂಗ್ರಕ್ಕೆ 500 ಲೀಟರ್ ಸಾಮರ್ಥ್ಯದ ಸಿಂಟ್ಯಾಕ್ಸ್, ನೀರೆತ್ತುವ ಮೋಟಾರ್, ಎಂಟು ಸಾವಿರ ರೂ.ದಲ್ಲಿ ಆವರಣದಲ್ಲಿ ಕಲ್ಲು ಹಾಸಿಗೆ ಹೀಗೆ ಬಂದ ದೇಣಿಗೆಯನ್ನೇ ಸದ್ಭಳಕೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ.
Related Articles
Advertisement
ಹಸಿರು ವನ ಶಾಲೆಗೊಂದು ವನ, ಮಗುವಿಗೊಂದು ಮರ ಯೋಜನೆ ಅಡಿಯಲ್ಲಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಸಿ ನೆಟ್ಟು ಅದರ ಬೆಳವಣಿಗೆ ಸಂಪೂರ್ಣ ಜವಾಬ್ದಾರಿ ವಹಿಸುವ ಮೂಲಕ ಆವರಣದಲ್ಲಿ ಹೊಂಗೆ, ಅರಳಿ, ಮಾವು, ಬೇವು, ತುಳಿಸಿ, ತೇಗ, ಅಶೋಕ, ನುಗ್ಗೆ ಕರಿಬೇವು, ಹುಣಿಸೆ, ಬದಾಮಿ ಹೀಗೆ ಅನೇಕ ಬೆಳೆದ ಮರಗಳು ಕಂಗಳಿಸುತ್ತಿವೆ.
ಬ್ಯಾಂಕಿಂಗ ವ್ಯವಸ್ಥೆ: ಶಾಲೆಯಲ್ಲೇ ವಿದ್ಯಾರ್ಥಿಗಳ ಖಾತೆ ತೆರೆದು ಉಳಿತಾಯದ ಹವ್ಯಾಸ ಬೆಳೆಸುವ ಮೂಲಕ ಬ್ಯಾಂಕ್ ವ್ಯವಹಾರದ ಜ್ಞಾನ ಮೂಡಿಸಲಾಗಿದೆ.
ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ವರೆಗೂ ಮುಂಚೂಣಿಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಕೈಗನ್ನಡಿಯಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಪೂರಕ ಎನ್ನುವುದಕ್ಕೆ ಹೆಚ್ಚಿನವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಆದರ್ಶ, ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ಶಾಲೆಗಳ ನೇಮಕಾತಿಯಲ್ಲಿ ಅನೇಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಲ್ಲದೇ, ಗಣಿತ ಕಲಿಕಾ ಪರೀಕ್ಷೆಯಲ್ಲೂ ಮೂರು ಪ್ರಶಸ್ತಿಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಶಾಲೆಯ ಕೋಣೆಗಳಲ್ಲಿ ಗೋಡೆ ಬರಹ ಹಾಗೂ ಚಿತ್ರ ರಚನೆಯಲ್ಲಿ ಸ್ವತಃ ಶಿಕ್ಷಕ ರವಿ ಅವರು ಮಕ್ಕಳೊಂದಿಗೆ ಸೇರಿ ಅಂದ, ಚಂದವಾಗಿ ಮೂಡಿಸಿರುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ.