Advertisement

ಅಗ್ನಿ ಅವಘಡ ಶಮನಕ್ಕೂ ತಟ್ಟಿದ ನೀರಿನ ಬರ ಬಿಸಿ

11:20 AM May 26, 2019 | Team Udayavani |

ಆಳಂದ: ತಾಲೂಕಿನಲ್ಲಿ ಆಕ್ಮಸಿಕವಾಗಿ ಅಗ್ನಿ ಅವಘಡ ಸಂಭವಿಸಿದರೆ ಸಕಾಲಕ್ಕೆ ಧಾವಿಸುವ ಅಗ್ನಿ ಶಾಮಕ ವಾಹನಕ್ಕೂ ನೀರಿನ ಬರ ಎದುರಾಗಿದೆ.

Advertisement

ಅತ್ಯಂತ ಸೂಕ್ಷ್ಮ ಹಾಗೂ ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದಂತ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ಠಾಣೆಗೂ ನೀರಿನ ಕೊರತೆ ಎದುರಾಗಿದ್ದರಿಂದ ವಾಹನದ ಟ್ಯಾಂಕಿಗೂ ನೀರು ತುಂಬಿಕೊಳ್ಳಲು ಸಿಬ್ಬಂದಿಗಳು ವಾಹನದೊಂದಿಗೆ ನೀರಿದ್ದ ಜಾಗಕ್ಕೆ ಅಲೆಯುತ್ತಿರುವುದು ಕಂಡು ಬಂದಿದೆ. ಆಳಂದ ಪಟ್ಟಣದ ಬಸ್‌ ನಿಲ್ದಾಣ ಹತ್ತಿರವಿರುವ ಅಗ್ನಿಶಾಮ ಠಾಣೆಯಲ್ಲಿ ಇರುವ ಕೊಳವೆ ಬಾವಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ನೀರು ಒದಗಿಸುವಂತೆ ಅಗ್ನಿಶಾಮಕ ಠಾಣೆ ಅಧಿಕಾರಿಗಳು ತಹಶೀಲ್ದಾರ್‌ ಮತ್ತು ಪುರಸಭೆ ಅಧಿಕಾರಿಗಳಿಗೆ ಮೌಖೀಕ, ಲಿಖೀತವಾಗಿ ಕ್ರಮಕೈಗೊಳ್ಳುವಂತೆ ಕೇಳಿಕೊಂಡರೂ ಇದುವರೆಗೂ ನೀರಿನ ಸೌಲಭ್ಯ ದೊರೆತಿಲ್ಲ. ಸದ್ಯ ಠಾಣೆಯಿಂದ ಸುಮಾರು 2 ಕಿ.ಮೀ ದೂರದ ಪುರಸಭೆ ಫಿಲ್ಟರ್‌ಬೆಡ್‌ನಿಂದ ನೀರು ತುಂಬಿಸಿಕೊಳ್ಳಲಾಗುತ್ತಿದೆ. ಆದರೆ ಫಿಲ್ಟರ್‌ ಬೆಡ್‌ಗೆ ವಾಹನ ಹೋಗಿ ಬರಲು ಸೂಕ್ತ ರಸ್ತೆಯೇ ಇಲ್ಲ. ತುರ್ತು ಸಂದರ್ಭದಲ್ಲಿ ಸಮಯಕ್ಕೆ ನೀರು ತುಂಬಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಅಗ್ನಿಶಾಮಕದಲ್ಲಿ 5 ಸಾವಿರ ಲೀಟರ್‌ ನೀರಿನ ಸಾಮರ್ಥ್ಯವಿರುವ ಎರಡು ನೀರಿನ ಟ್ಯಾಂಕ್‌ಗಳಿದ್ದು, ಸತತವಾಗಿ ತುಂಬಿಡಬೇಕಾಗುತ್ತದೆ. ಇದಕ್ಕಾಗಿ ಕಚೇರಿ ಆವರಣದಲ್ಲಿ ಕೊರೆದ ಕೊಳವೆ ಬಾವಿ ನೀರು ಸಿಬ್ಬಂದಿ ವಸತಿ ಗೃಹ ಹಾಗೂ ವಾಹನಕ್ಕೂ ಸಾಕಾಗಿತ್ತು. ಆದರೆ ಬೇಸಿಗೆಯಿಂದಾಗಿ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಕೊಳವೆ ಬಾವಿ ನೀರು ವಸತಿ ಗೃಹಕ್ಕೆ ಸಾಕಾಗಿ, ವಾಹನಕ್ಕೆ ತುಂಬಲು ಸಾಲುತ್ತಿಲ್ಲ. ನೀರು ಬೇಕೆಂದಾಗ ಆಳಂದ ಕೆರೆಯಿಂದಲೂ ಟ್ಯಾಂಕಿಗೆ ತುಂಬಲಾಗುತ್ತಿತ್ತು. ಆದರೆ ಆಳಂದ ಕೆರೆಯ ನೀರು ಇಳಿಕೆಯಾಗಿದ್ದರಿಂದ ಕೆರೆಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ಠಾಣೆ ಮುಂಭಾಗದ ಹೆದ್ದಾರಿ ಬದಿಯಿಂದಲೇ ಅಮರ್ಜಾ ಅಣೆಕಟ್ಟೆಯಿಂದ ಪಟ್ಟಣದ ಪಿಲ್ಟರ್‌ಬೆಡ್‌ಗೆ ಸಾಗಿರುವ ಸಾಕಷ್ಟು ಪ್ರಮಾಣದ ಕುಡಿಯುವ ನೀರಿನ ಮುಖ್ಯವಾದ ದೊಡ್ಡ ಪೈಪಲೈನ್‌ನಿಂದಲೇ ಠಾಣೆಗೆ ನೀರು ಕೊಡುವಂತೆ ಹತ್ತಾರು ಬಾರಿ ಕೇಳಿಕೊಳ್ಳಲಾಗಿದೆ. ಆದರೆ ಸ್ಪಂದನೆ ಸಿಕ್ಕಿಲ್ಲ. ತುರ್ತು ಸಂದರ್ಭದಲ್ಲಿ ದೂರದ ಪ್ರದೇಶಗಳಿಗೆ ಹೋಗಿ ವಾಹನಕ್ಕೆ ನೀರು ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಯಾವ ಸಂದರ್ಭದಲ್ಲಿ ಎಂಥ ಪರಿಸ್ಥಿತಿ ಎದುರಾಗುತ್ತದೆಯೋ ಗೊತ್ತಿಲ್ಲ. ಸಜ್ಜಾಗಿ ಎದುರಿಸಲು ಮೊದಲು ಸಮಪರ್ಕ ನೀರು ಕೊಟ್ಟರೆ ಅನಾಹುತ ತಡೆಯಲು ಸಾಧ್ಯವಾಗುತ್ತದೆ.
ಶಂಕ್ರಪ್ಪ, ಪ್ರಭಾರಿ ಅಗ್ನಿ ಶಾಮಕ ಠಾಣಾಧಿಕಾರಿ •ಮಾಣಿಕ ಹೂಗಾರ, ಸಹಾಯಕ ಅಧಿಕಾರಿ

2014ರಲ್ಲಿ ವಿಜಯಪುರ ನಗರದ ಅಗ್ನಿಶಾಮಕ ಠಾಣೆಗೂ ನೀರಿನ ಬರ ಎದುರಾದಾಗ ಅಲ್ಲಿನ ಸಂಬಂಧಿತರಿಗೆ ನೀರು ಒದಗಿಸಬೇಕೆಂದು ಕೋರಿದ್ದರೂ ನಿಷ್ಕಾಳಜಿ ತೋರಿದ್ದರು. ಆದರೆ ಹಠಾತ್‌ ಆಗಿ ಅಲ್ಲಿನ ಡ್ರಿಮಿಲ್ಯಾಂಡ್‌ ಚಿತ್ರಮಂದಿರ ಹಿಂಬದಿ ಕಟ್ಟಿಗೆಯ ಅಡ್ಡೆಗೆ (ಸಾಮಿಲ್) ಬೆಂಕಿ ಹತ್ತಿ ಸುಟ್ಟ ಘಟನೆಯಿಂದ ಪಾಠಕಲಿತ ಮೇಲೆ, ಅಲ್ಲಿನ ನೀರಿನ ಮುಖ್ಯ ಪೈಪ್‌ಲೈನ್‌ನಿಂದಲೇ ನೀರು ಒದಗಿಸಿದ ಉದಾಹರಣೆಗಳಿವೆ. ಇದೇ ಮಾದರಿಯಲ್ಲಿ ಇಲ್ಲಿನ ಮುಖ್ಯ ನೀರಿನ ಪೈಪ್‌ನಿಂದಲೇ ನೀರನ್ನು ಯಾಕೆ ಕೊಡಬಾರದು.
ಅಗ್ನಿಶಾಮಕ ಸಿಬ್ಬಂದಿ, ಆಳಂದ

ಮಹಾದೇವ ವಡಗಾಂವ

Advertisement
Advertisement

Udayavani is now on Telegram. Click here to join our channel and stay updated with the latest news.

Next