ಆಳಂದ: ಭಾರತ ಸರ್ಕಾರದ ಜಲಸಂಪನ್ಮೂಲ ಇಲಾಖೆ ಪ್ರತಿ ಐದು ವರ್ಷಗಳಿಗೊಮ್ಮೆ ಸಣ್ಣ ನೀರಾವರಿ ಗಣತಿ ಕಾರ್ಯವನ್ನು ಕೈಗೊಳ್ಳುತ್ತದೆ.
ಈ ಗಣತಿ ಕಾರ್ಯಕ್ಕೆ ನೇಮಕವಾಗುವ ಎಲ್ಲ ಅಧಿಕಾರಿಗಳು ತಾಲೂಕಿನ ಕೆರೆಗಳ ಕುರಿತು ನಿಖರ ಮತ್ತು ವಸ್ತುನಿಷ್ಠ ಮಾಹಿತಿ ಒದಗಿಸಬೇಕು ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆದ 6ನೇ ಸಣ್ಣ ನೀರಾವರಿ ಗಣತಿ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ವಿಧದ ಸಣ್ಣ ನೀರಾವರಿ ಯೋಜನೆಗಳ ಸಮಗ್ರವಾದ ಮಾಹಿತಿ ಹೊಂದುವ ಗುರಿಯೊಂದಿಗೆ ಸಣ್ಣ ನೀರಾವರಿ ಗಣತಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸಂಗ್ರಹಿಸುವ ನಿಖರ ಮಾಹಿತಿಯಿಂದ ಅಂತರ್ಜಲ ಮಟ್ಟವನ್ನು ಅಂದಾಜಿಸಲು ಸಾಧ್ಯವಾಗುತ್ತದೆ ಎಂದರು.
ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು ಜವಾಬ್ದಾರಿಯೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಯಸೂಫ್ ಅಲಿ ಮಾತನಾಡಿ, ಸಣ್ಣ ನೀರಾವರಿ ಯೋಜನೆಗಳು, ಬಾವಿ, ಆಳವಲ್ಲದ ಬಾವಿ, ತೆರೆದ ಬಾವಿ, ಕೊಳವೆ ಬಾವಿ, ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳು, ಏತ ನೀರಾವರಿ ಯೋಜನೆಗಳ ಗಣತಿ ನಡೆಯಲಿದೆ ಎಂದರು.
ಸಣ್ಣ ನೀರಾವರಿ ಗಣತಿ ಮುಖ್ಯವಾಗಿದ್ದು, ಇದನ್ನು ಯಾರೂ ನಿರ್ಲಕ್ಷé ಮಾಡುವಂತಿಲ್ಲ. ಹೀಗಾಗಿ ಗಣತಿಗೆ ನೇಮಕವಾಗುವ ಎಲ್ಲರೂ ಕಡ್ಡಾಯವಾಗಿ ಮತ್ತು ವಸ್ತು ನಿಷ್ಠ ಕಾರ್ಯ ಕೈಗೊಂಡು ಭರ್ತಿ ಮಾಡಿದ ನಮೂನೆಗಳು ನಿಗದಿತ ದಿನಾಂಕದೊಳಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಸಲ್ಲಿಸಬೇಕು. ನಂತರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಿಂದ ಪರಿಶೀಲಿಸಿ ಭರ್ತಿ ಮಾಡುವ ನಮೂನೆಗಳನ್ನು ಮುಖ್ಯ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ಇವರಿಗೆ ಮಾರ್ಚ್ 15ರೊಳಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ದಾದಾಗೌಡ, ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ಶಿರಸ್ತೇದಾರ ಅರುಣಕುಮಾರ, ಆನಂದ ಲಕ್ಕಾ, ಗುರುಮೂರ್ತಿ ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಲೇಖೀಗರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.