ಆಳಂದ: ಸಾರ್ವಜನಿಕ ಸ್ಥಳ, ಉದ್ಯಾನವನ ಹಾಗೂ ರಸ್ತೆಗಳಲ್ಲಿ ಅನ ಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡ ತೆರುವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಕ್ರಮಕೈಗೊಳ್ಳಲು ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ, ಇದಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಹೇಳಿದರು.
ತಾಲೂಕು ಪಂಚಾಯತ ಕಚೇರಿಯಲ್ಲಿ ತಾಲೂಕು ಆಡಳಿತ ಕರೆದ ವಿವಿಧ ಸಮುದಾಯ, ಸಂಘ, ಸಂಸ್ಥೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಸಾರ್ವಜನಿಕ ಸ್ಥಳ, ಉದ್ಯಾನವನ ಹಾಗೂ ರಸ್ತೆಗಳಲ್ಲಿ ಅನಧಿಕೃತ ಕಟ್ಟಡಗಳು ಇರುವ ಕುರಿತು ಗಮನಕ್ಕೆ ಬಂದರೆ ಕಾರ್ಯಾಚರಣೆ ಮೊದಲೆ ಅವುಗಳನ್ನು ಸ್ವಯಂ ಪ್ರೇರಿತವಾಗಿ ತಾವೇ ತೆರುವುಗೊಳಿಸಿಕೊಳ್ಳಿ. ಇಲ್ಲವಾದಲ್ಲಿ ಇಂಥ ಕಟ್ಟಡಗಳನ್ನು ಗುರುತಿಸುವ ಸಲುವಾಗಿ ಸರ್ವೇ ಕಾರ್ಯ ನಡೆಯುತ್ತಿದೆ. ಸರ್ವೇ ಬಳಿಕ ಕಟ್ಟಡಗಳ ತೆರವಿಗಾಗಿ ನೋಟಿಸ್ ಮೂಲಕ ಕಾಲಾವಕಾಶ ನೀಡಲಾಗುತ್ತದೆ. ಇದಾದ ಬಳಿಕವೂ ಯಾವುದೇ ಸ್ಪಂದನೆ ಸಿಗದೆ ಇದ್ದಲ್ಲಿ ಆಡಳಿತವೇ ಮುಂದಾಗಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತದೆ. ಕಾನೂನಿನ ಹಾಗೂ ಸುಪ್ರೀಂ ಕೋರ್ಟ್ ಎದುರು ಯಾರೂ ದೊಡ್ಡವರಲ್ಲ. ಎಲ್ಲರು ತಲೆಬಾಗಿ ನಡೆದುಕೊಳ್ಳಬೇಕು ಎಂದರು.
ಮುಖಂಡರ ಹೇಳಿಕೆಗಳನ್ನು ಪ್ರತ್ಯೇಕವಾಗಿ ಆಲಿಸಿದ ತಹಶೀಲ್ದಾರ್‌ರು, ಕಾರ್ಯಾಚರಣೆಗೆ ಹೆಚ್ಚಿನ ಕಾಲಾವಕಾಶ ಇಲ್ಲ. ಎಲ್ಲವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕಾಗಿದೆ ಎಂದರು.
ಸಿಪಿಐ ಕಾರ್ಯಕರ್ತ ಆಸಾ ಕ್ ಮುಲ್ಲಾ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಬಾಬುರಾವ್ ಅರುಣೋದಯ, ಧರ್ಮಾ ಬಂಗರಗಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲಾಂ ಸಗರಿ, ಮುಖಂಡ ದತ್ತಪ್ಪ ಹೊನ್ನಳ್ಳಿ, ದಯಾನಂದ ಶೇರಿಕಾರ, ವೀರಶೈವ ಸಮಾಜದ ಅಧ್ಯಕ್ಷ ಡಾ| ಶಿವಾನಂದ ಬೇಡಗೆ, ಮುಖಂಡ ಬಾಬುರಾವ್ ಮಡ್ಡೆ, ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಪುರಸಭೆ ಮಾಜಿ ಅಧ್ಯಕ್ಷ ಮೊಹೀಜ್ ಕಾರಬಾರಿ, ಅಮ್ಜದ್ ಅಲಿ ಖರ್ಜುಗಿ, ಮಹ್ಮದ್ ಮುಸ್ತಾಕ್ ಮೌಲಾನಾ ಮಾತನಾಡಿದರು.
ಶಾಂತಿವನ ಚರ್ಚ್‌ನ ಫಾದರ್ ಅನೀಲ ಪ್ರಸಾದ, ಬಿಜೆಪಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ರೇವಣಸಿದ್ಧಪ್ಪ ನಾಗೂರೆ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ, ಜಿಪಂ ಎಇಇ ಮಲ್ಲಿಕಾರ್ಜುನ ಕಾರಬಾರಿ, ತಾ.ಪಂ ಸಹಾಯಕ ಅಧಿಕಾರಿ ಮೊಮ್ಮದ್ ಸಲೀಂ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಅರುಣಕುಮಾರ, ಮನೋಜ, ಆನಂದ ಲಕ್ಕಾ ಮತ್ತಿತರರು ಇದ್ದರು.