Advertisement

ಶಾಸ್ತ್ರದ ಶಿಸ್ತಿನಲ್ಲೊಂದು ಭಾವೋತ್ಕರ್ಷದ ಅನ್ವೇಷಣೆ

12:30 AM Mar 08, 2019 | Team Udayavani |

ಮಾತು ಮತ್ತು ಧಾತು ಸಮಪಾಕದಲ್ಲಿ ಮೇಳೈಸಿದಾಗ ಮಾತ್ರ ಸಂಗೀತದಲ್ಲಿ ರಸಾನುಭಾವ ಪರಾಕಾಷ್ಠೆಯನ್ನು ತಲುಪುತ್ತದೆ ಎಂಬುದನ್ನು ಪಟ್ಟಾಭಿರಾಮ ಪಂಡಿತರ ಕಛೇರಿ ಶ್ರುತಪಡಿಸಿತು. 34ನೇ ಆಲಂಪಾಡಿ ವೆಂಕಟೇಶ ಶಾನುಭಾಗ ಸ್ಮಾರಕ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿ ನೀಡಿದ ಅವರು ಮಾತು – ಧಾತುಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡು ಕೇಳುಗರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನುಂಟು ಮಾಡಲು ಶಕ್ತರಾದರು. ಪರಸ್ಪರ ಸ್ಪರ್ಧಾತ್ಮಕವಾಗಿ ಮೂಡಿಬಂದು ರಂಜಿಸಿದ ಹಿಮ್ಮೇಳ ಧಾತುವಿಗೆ ಜೀವಂತಿಕೆಯ ಕಳೆಯನ್ನಿತ್ತುದುದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಕಾರಣವಾಯಿತು.

Advertisement

ಅಖೀಲಾಂಡೇಶ್ವರಿ ರಕ್ಷಮಾಂ-ದ್ವಿಜಾವಂತಿಯ ದೀಕ್ಷಿತರ ಕೀರ್ತನೆಯೊಂದಿಗೆ ಕಛೇರಿ ಆರಂಭಿಸಿದ ಪಂಡಿತ ಶೋಭಿಲ್ಲು ಸಪ್ತಸ್ವರದಲ್ಲಿ ತೆಗೆದ ವೇಗ ಜಗನ್ಮೋಹಿನಿಯ ಭಾವಗಳನ್ನು ಪೋಷಿಸಿಕೊಳ್ಳುತ್ತಾ ಒಂದು ಗಟ್ಟಿತನವನ್ನು ನಿರ್ಮಿಸಿ ಕಛೇರಿಯ ಯಶಸ್ಸಿಗೆ ಭದ್ರ ಬುನಾದಿಯನ್ನು ನಿರ್ಮಿಸಿತು. ರವಿಚಂದ್ರಿಕೆ ಒಂದು ವಿಸ್ತಾರವಾದ ಮನೋಧರ್ಮದೊಂದಿಗೆ ಮಾಕೇಲರಾ ವಿಚಾರಮು ಕೃತಿಯಲ್ಲಿ ಪ್ರಸ್ತುತವಾಯಿತು. ಹೃಸ್ವ ಆಲಾಪನೆಯಿಂದ ಸ್ವಾತಿ ತಿರುನಾಳರ ಪದವರ್ಣ ಸುಮ ನಾಯಕ ಕಾಪಿಯಲ್ಲ ಚರಣ ಸ್ವರಗಳ ಬಳಿಕ ರಾಗಮಾಲಿಕೆಯಾಗಿ ಕಲ್ಯಾಣಿ, ಬಮಾಸ್‌, ವಸಂತ ಮೊದಲಾದ ರಾಗಗಳನ್ನು ಹಾಡಿದರು. ವಿಸ್ತಾರದ ಪ್ರಸ್ತುತಿಗೆ ಮುಂದಕ್ಕೆ ಕಾಮವರ್ಧಿನಿಯನ್ನು ಆಯ್ದುಕೊಂಡರು. ಸುಖನಾದದ ಆಲಾಪನೆ, ಭಾವಪೂರ್ಣ ನೆರವಲ್‌ ಮನೋಧರ್ಮಗಳೊಂದಿಗೆ ಆರೈಕೆಗೊಂಡ ತ್ಯಾಗರಾಜರ ವಾದೇರ ದೈವವು ಮಾನಸ ಕೃತಿ ತನ್ಮಯಗೊಳಿಸಿತು. ಬಳಿಕ ಪ್ರಧಾನ ಕೃತಿಯಾಗಿ ತ್ಯಾಗರಾಜರ ಮೋಹನರಾಮ ಮೂಡಿಬಂತು. ಆಲಾಪನೆಯಿಲ್ಲವಾದರೂ ವಿಸ್ತಾರವಾದ ಮನೋಧರ್ಮದಿಂದ ಮೋಹನದ ಎಳೆಎಳೆಯನ್ನು ಮೊಗೆದು ಕೊಟ್ಟ ಪಂಡಿತ್‌ ಗುರುಗಳಾದ ಪಾಲ್ಗಾಟ್‌ ಕೆ.ವಿ. ನಾರಾಯಣ ಸ್ವಾಮಿಯವರ ಬಾನಿಯನ್ನು ನೆನಪಿಸಿದರು. ರಾಮ ರಾಮ ರಾಮ ಸೀತಾರಾಮ (ತಿಲಾಂಗ್‌, ರೂಪಕ) ಹರಿಹರ ನಿನ್ನನ್ನು ಮೆಚ್ಚಿಸಬಹುದು (ಸಿಂಧುಭೈರವಿ, ಆದಿ) ಜಗದೋದ್ಧಾರನ (ಹಿಂದೂಸ್ತಾನಿ ಕಾಪಿ, ಆದಿ), ಪುರಂದರದಾಸರ ಕೀರ್ತನೆಗಳ ಬಳಿಕ ರಾಮನಾಥ್‌ ಶ್ರೀನಿವಾಸ ಅಯ್ಯಂಗಾರರ ಪೂರ್ಣಚಂದ್ರಿಕದ ತಿಲ್ಲಾನ ಹಾಡಿ ಎರಡೂವರೆ ತಾಸುಗಳ ಕಛೇರಿಗೆ ಮಂಗಳ ಹಾಡಿದರು.ವೇಣುಗೋಪಾಲ ಶಾನುಭಾಗ ವಯೋಲಿನ್‌ನಲ್ಲಿ ಮಿಂಚಿದರು. ಮೃದಂಗದಲ್ಲಿ ಡಾ| ಶಂಕರರಾಜ್‌, ಘಟಂನಲ್ಲಿ ಕುರುಚಿತ್ತಾನಂ ಆನಂದಕೃಷ್ಣನ್‌ ಸಹಕರಿಸಿ ಒಂದು ಸೊಗಸಾದ ತನಿ ಆವರ್ತನವನ್ನಿತ್ತರು.

ಇದರ ಮೊದಲು ನಡೆದ ಸಂಗೀತಾರಾಧನಾ ಕಾರ್ಯಕ್ರಮದಲ್ಲಿ ರಾಧಾಮುರಳೀಧರ್‌, ಡಾ| ಶೋಭಿತಾ ಸತೀಶ್‌, ಡಾ| ಇಂಚರಾ, ಪ್ರಭಾಕರ ಕುಂಜಾರು, ನಯನಾರಾಜ್‌, ಪುರುಷೋತ್ತಮ ಪುಣಿಂಚಿತ್ತಾಯ, ಗೋವಿಂದನ್‌ ನಂಬ್ಯಾರ್‌, ಬಡಗಕ್ಕರೆ ಶ್ರೀಧರ ಭಟ್‌ ಮೊದಲಾದವರು ಭಾಗವಹಿಸಿದರು. 

ಸುಕುಮಾರ ಆಲಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next