Advertisement

ಆಲಮೇಲ ಜನರಿಗೆ ಶುದ್ಧ ಕಡಿಯುವ ನೀರು ಮರೀಚಿಕೆ

10:57 AM May 09, 2019 | Naveen |

ಆಲಮೇಲ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಗೊಂಡು ಎರಡು ತಿಂಗಳಾದರು ಜನರಿಗೆ ಶುದ್ಧ ನೀರು ಇನ್ನೂ ಮರೀಚಿಕೆಯಾಗಿದೆ.

Advertisement

ಪಟ್ಟಣದ ಜನರಿಗೆ ಬಳಕೆ ನೀರಿಗೆ ಸಮಸ್ಯೆ ಇಲ್ಲದಿದ್ದರು ಶುದ್ಧ ಕುಡಿಯುವ ನೀರಿಗೆ ಮಾತ್ರ ಪರದಾಡುವ ಪರಿಸ್ಥಿತಿ ಇದೆ. ಈ ಸಮಸ್ಯೆ ಅರಿತುಕೊಂಡು ಪಟ್ಟಣದ 16ನೇ ವಾರ್ಡ್‌ನಲ್ಲಿರುವ ಪುರಾತನ ಅಕ್ಕ ತಂಗಿ ಬಾವಿ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದರೂ ಪ್ರಯೋಜನಕ್ಕೆ ಬರದಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತರಾತುರಿಯಲ್ಲಿ ನೀರಿನ ಘಟಕ ನಿರ್ಮಿಸಲಾಗಿದೆ.ಯಾವುದೇ ಮೂಲದಿಂದ ನೀರಿನ ವ್ಯವಸ್ಥೆ ಕಲ್ಪಿಸದೆ ಉದ್ಘಾಟನೆ ದಿನದಂದು ಬೇರೆ ಕಡೆಯಿಂದ ನೀರು ಸಂಗ್ರಹಿಸಿ ನೀರಿನ ಘಟಕ ಉದ್ಘಾಟಿಸಿ ಕೈ ತೊಳೆದುಕೊಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯ ವೈಖರಿಯಿಂದ ಸಂತಸದಲ್ಲಿದ್ದ ಜನರಿಗೆ ನಿರಾಶೆಯಾಗಿದೆ.

ಉದ್ಘಾಟನೆಗೊಂಡ ಬಳಿಕ ಅಲ್ಲಿನ ನಿವಾಸಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ ಎಂದುಕೊಂಡಿದ್ದರು. ಆದರೆ ಎರಡು ತಿಂಗಳಾದರು ಘಟಕ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಜನರಿಗೆ ಶುದ್ಧ ನೀರು ಮರೀಚಿಕೆಯಾದಂತಾಗಿದೆ.

16ನೇ ವಾರ್ಡ್‌ ಜನರು ಪಪಂ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಬಾವಿಯಲ್ಲಿ ನೀರಿಲ್ಲ ನಾವೇನು ಮಾಡುಲು ಸಾಧ್ಯ ಎನ್ನುತ್ತಾರೆ. ಬಾವಿಯಲ್ಲಿ ನೀರಿಲ್ಲದಿದ್ದರೆ ನೀರಿನ ಘಟಕದ ಬಾವಿಯ ಸಮೀಪದಲ್ಲೆ ಕೊಳವೆ ಬಾವಿಯಿದ್ದು ಅದನ್ನು ಬಳಸಿಕೊಂಡು ಶುದ್ಧ ನೀರು ವಿತರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

Advertisement

ಬಾವಿ ಸ್ವಚ್ಛಗೊಳಸಿ ನೀರಿನ ಘಟಕ ನಿರ್ಮಾಣ ಮಾಡಿ ಎರಡು ತಿಂಗ ಹಿಂದೆ ಉದ್ಘಾಟಿಸಿ ಪಪಂಗೆ ಹಸ್ತಾಂತರಿಸಲಾಗಿದೆ. ಸದ್ಯ ಬಾವಿಯಲ್ಲಿ ನೀರಿಲ್ಲದಿದ್ದರೆ ನಾವೇನು ಮಾಡಬೇಕು. ಸಮಿಪದಲ್ಲಿ ಕೊಳವೆ ಬಾವಿ ಇದ್ದರೆ ಅಲ್ಲಿಂದ ಪೈಪ್‌ಲೈನ್‌ ಮಾಡಿಕೊಟ್ಟರೆ ಮುಂದಿನ ವ್ಯವಸ್ಥೆ ನಾವು ಮಾಡುತ್ತೇವೆ.
•ಕೋಟ್ಯಾಣನವರ,
ಶುದ್ದ ನೀರಿನ ಘಟಕ ನಿರ್ಮಾಣ ಎಂಜಿನಿಯರ್‌

ನೀರಿನ ಘಟಕ ನಿರ್ಮಾಣದ ಹಂತದಲ್ಲೆ ಬಾವಿಯಲ್ಲಿ ನೀರಿರಲಿಲ್ಲ. ನೀರು ಸರಬರಾಜು ವ್ಯವಸ್ಥೆ ಮಾಡಿಕೊಳ್ಳದೆ ಬೇರೆ ಕಡೆಯಿಂದ ನೀರು ತಂದು ನೀರಿನ ಘಟಕದಲ್ಲಿ ಸಂಗ್ರಹಿಸಿ ಉದ್ಘಾಟಿಸಿ ಕೈತೊಳೆದುಕೊಂಡಿದ್ದಾರೆ. ಬಾವಿಯ ಪಕ್ಕದಲ್ಲೆ ಕೊಳವೆ ಬಾವಿ ಇದ್ದು ಅಲ್ಲಿ ಸಾಕಸ್ಟು ನೀರು ಇದ್ದು ಅದನ್ನು ಬಳಸಿಕೊಂಡು ಶುದ್ಧ ನೀರು ಒದಗಿಸಬೇಕು.
ಕಾಸಿಂ ಸಾಲೋಟಗಿ, ಪಪಂ ಸದಸ್ಯ

ಪಟ್ಟಣದ ಒಂದನೇ ವಾರ್ಡ್‌ ವಿನಾಯಕ ನಗರದಲ್ಲಿ ಹೊರತು ಪಡಿಸಿ ಬೇರೆಲ್ಲೂ ನೀರಿನ ಸಮಸ್ಯೆ ಇಲ್ಲ. ವಿನಾಯಕ ನಗರದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಕೆರೆ ಬತ್ತಿದ್ದರಿಂದ ಪಟ್ಟಣದಲ್ಲಿನ ಕೊಳವೆ ಬಾವಿಗಳು ಖಾಲಿಯಾಗಿವೆ. ಕಾಲುವೆ ಮೂಲಕ ಕೆರೆಗೆ ನೀರು ತುಂಬಿದ್ದು ಎಲ್ಲ ಕೊಳವೆ ಬಾವಿಗೆ ನೀರು ಬರುವ ಸಾಧ್ಯತೆಯಿದ್ದು ನೀರಿನ ಸಮಸ್ಯೆ ಆಗುವುದಿಲ್ಲ.
•ಲಾಲ್ಸಾಬ ದೇವರಮನಿ,
ಪಪಂ ಸಿಬ್ಬಂದಿ

ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next