ಆಲಮೇಲ: ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ವಸತಿಗಳಲ್ಲಿ ಅನಧಿಕೃತ ಹಾಗೂ ಬಾಡಿಗೆ ಕಟ್ಟಿ ವಾಸಿಸುತ್ತಿದ್ದ 91 ವಸತಿ ಗೃಹಗಳ ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಪೊಲೀಸರ ಸುಪರ್ದಿಯಲ್ಲಿ ನಡೆಯಿತು.
ತೆರವು ಕಾರ್ಯಾಚರಣೆ ನೋಡಲ್ ಅಧಿಕಾರಿ ಎಂ.ಆರ್.ಕಂಧಾರೆ, ಅನುಷ್ಠಾನ ಅಧಿಕಾರಿಗಳಾದ ಅಂಬಣ್ಣ ಹರಳಯ್ಯ, ಬಿ.ಎಂ. ಹೊಟಗಾರ ನೇತೃತ್ವದ 30 ಜನ ಅಧಿಕಾರಿಗಳ ತಂಡ ಸಿಂದಗಿ ರಸ್ತೆ ಹಾಗೂ ಇಂಡಿ ರಸ್ತೆಯಲ್ಲಿನ ವಸತಿ ಗೃಹಗಳಲ್ಲಿ ವಾಸಿಸುತ್ತಿದ್ದವರನ್ನು ಹೊರಗೆ ಹಾಕಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಬೀಗ ಹಾಕಿ ಮುದ್ರೆಯೊತ್ತಿದರು.
ಅಕ್ರಮವಾಗಿ ಕಟ್ಟಿದ್ದ ದಿನಸಿ ಅಂಗಡಿಯನ್ನು ಒಂದು ವಾರದೊಳಗೆ ಖಾಲಿ ಮಾಡಿ ನೆಲಸಮ ಮಾಡುವುದಾಗಿ ಹೇಳಿದರು. ಕೋರ್ಟ್ ಆದೇಶವನ್ನು ನಾವು ಪಾಲಿಸಿದ್ದೇವೆ. ಖಾಲಿ ಮಾಡಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು, ಅಲ್ಲದೇ ಕಳೆದ ಮೂರು ದಿನಗಳಿಂದ ಧ್ವನಿವರ್ಧದಲ್ಲಿ ಮನೆ ಖಾಲಿ ಮಾಡುವಂತೆ ಹೇಳಿತ್ತು, ಎಲ್ಲ ನಿಯಮಗಳನ್ನು ಪಾಲಿಸಿ ಕೋರ್ಟ್‌ಗೆ ವರದಿ ನೀಡುವುದಾಗಿ ಅನುಷ್ಠಾನಾಧಿಕಾರಿ ಅಂಬಣ್ಣ ಎಚ್. ಮಾಧ್ಯಮದವರಿಗೆ ಮಾಹಿತಿ ನೀಡಿದರು.ಒಟ್ಟು 168 ವಸತಿ ಗೃಹಗಳಿದ್ದು ಇಲಾಖೆ ಸಿಬ್ಬಂದಿ ಹೊರತುಪಡಿಸಿ ಬಾಡಿಗೆ ರೂಪದಲ್ಲಿದ್ದ 49 ವಸತಿಗಳಲ್ಲಿನ ಹಾಗೂ ಅಕ್ರಮ ಪ್ರವೇಶ ಮಾಡಿದ್ದ 30 ವಸತಿಗಳು, 11 ವಸತಿಗಳಲ್ಲಿನ ಇಲಾಖೆಯ ನಿವೃತ್ತಗೊಂಡವರು ವಾಸವಾಗಿದ್ದ ಮನೆಗಳು ಸೇರಿ ಒಟ್ಟು 91 ಮನೆಗಳು ತೆರವುಗೊಳಿಸಿ ಬೀಗ ಹಾಕಲಾಯಿತು.
ಬಂದೋಬಸ್ತ್: ಬೆಳಗ್ಗೆಯಿಂದ ಸಾಂಯಕಾಲವರೆಗೂ ಪೊಲೀಸ್ ಬಂದೋಬಸ್‌ನಲ್ಲಿ ಕಾರ್ಯಾಚರಣೆ ನಡೆಯಿತು. ಸಿಪಿಐ ಕಾಂಬಳೆ ನೇತೃತ್ವದಲ್ಲಿ ಮೂರು ಜನ ಎಸ್.ಐ, ಡಿ.ಆರ್. ವಾಹನ , ಮಹಿಳೆ ಸಿಬ್ಬಂದಿ ಸೇರಿದಂತೆ 40ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತು.