ಆಲಮೇಲ: ಬರಗಾಲದಿಂದ ತತ್ತರಿಸಿರುವ ಭೀಮಾ ತೀರದ ಜನತೆಗೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿ ತೀರದ ಜನರಲ್ಲಿ ಆತಂಕ ಹೆಚ್ಚುತ್ತಿದೆ.
ಭೀಮಾ ನದಿಯಲ್ಲಿ ಕಳೆದ 5 ದಿನಗಳಿಂದ ನೀರಿನ ಹರಿವಿನ ಪ್ರಮಾಣ ಏರುತ್ತಿದ್ದು ನದಿ ತೀರದ ಗ್ರಾಮಗಳ ಜನರಲ್ಲಿ ಭಯ ಹೆಚ್ಚಿದೆ. ಬುಧವಾರ ರಾತ್ರಿಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಎರಡು ಬದಿಯನ್ನು ದಾಟಿ ನೀರು ತನ್ನ ವಿಸ್ತಾರವನ್ನು ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ದೇವಣಗಾಂವ, ಶಂಬೇವಾಡ, ಕುಮಸಗಿ, ಬ್ಯಾಡಗಿಹಾಳ ಗ್ರಾಮಗಳ ಮನೆಗಳ ಸಮೀಪ ನೀರು ನುಗ್ಗಿದ್ದು ಆತಂತ ಮತ್ತಷ್ಟು ಹೆಚ್ಚುವಂತಾಗಿದೆ.
ದೇವಣಗಾಂವದ ಭೀಮಾ ಸೇತುವೆ ಮಾಪನ ಪಟ್ಟಿಯಲ್ಲಿ ಗುರುವಾರ ಬೆಳಗ್ಗೆ 6ಕ್ಕೆ 9.10 ಮೀ. ಇದ್ದ ನೀರಿನ ಹರಿವು ಮಧ್ಯಾಹ್ನ 3ಕ್ಕೆ 9.85 ಮೀ. ಗೆ ಹೆಚ್ಚಳವಾಗಿ ಹರಯುತ್ತಿದೆ. ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ಗೆ ಸದ್ಯ 2.64 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು ಅಷ್ಟೇ ಪ್ರಮಾಣದ ನೀರು ಸೋನ್ನ ಬ್ಯಾರೇಜ್‌ನ 21 ಗೇಟ್‌ಗಳ ಹಾಗೂ ಪವರ್ ಹೌಸ್‌ನ 3 ಯುನಿಟ್ನಿಂದ ನೀರನ್ನು ನದಿ ಕೆಳಭಾಗಕ್ಕೆ ಹರಿಸಲಾಗುತ್ತಿದೆ. ಈಗಲೂ ಕೂಡಾ ನೀರಿನ ಹರಿವು ಹೆಚ್ಚಾಗುತ್ತಿದ್ದು ಗುರುವಾರ ಮತ್ತೆ ಉಜನಿ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್, ಮೀರಾ ಜಲಾಶಯದಿಂದ 64 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿರುವ ಮಾಹಿತಿ ಇದೆ ಎಂದು ಅಫಜಲಪುರ ಕೆಎನ್‌ಎನ್‌ಎಲ್ ಇಇ ಮಲ್ಲಿಕಾರ್ಜುನ ಜಾಕಾ, ಎಇಇ ಲಕ್ಷ್ಮೀಕಾಂತ ತಿಳಿಸಿದ್ದಾರೆ.
ಸಿಂದಗಿ-ಅಫಜಲಪುರ ತಾಲೂಕಿನ ಮಧ್ಯೆ ಭೀಮಾ ನದಿಗೆ ಕಟ್ಟಿರುವ ಘತ್ತರಗಿ-ಬಗಲೂರ ಬ್ಯಾರೇಜ್ ಸಂಪೂರ್ಣ ಮುಳುಗಿ ಹೋಗಿದ್ದು ನಿನ್ನೆಯಿಂದಲೇ ಸಂಚಾರ ಸ್ಥಗಿತ ಗೊಂಡಿದೆ. ದೇವಣಗಾಂವ-ಶಿವಪುರ ಬ್ಯಾರೇಜ್‌ಗಳು ಸಂಪೂರ್ಣ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಬಾರಖೇಡ ಬೀಳಗಿ ರಾಜ್ಯ ಹೆದ್ದಾರಿಯ ಶಿರಸಗಿ ದೇವರನಾವದಗಿ ಗ್ರಾಮದ ಮಧ್ಯೆ ಬರುವ ಹೆಬ್ಬಳ್ಳ (ಹಳ್ಳ)ಕ್ಕೆ ನೀರು ಒತ್ತು ಏರಿರುವುದರಿಂದ ಈ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೇವಣಗಾಂವ-ಕುಮಸಗಿ ಗ್ರಾಮದ ಮಧ್ಯದ ಕುಂಭಾವತ್ತಿ ಹಾಗೂ ಲಡೇನವತ್ತಿಯಲ್ಲಿ ನೀರು ತುಂಬಿದ್ದು ಕುಮಸಗಿಯಿಂದ ದೇವಣಗಾಂವ, ಕಡ್ಲೇವಾಡ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಂಬೇವಾಡ ಗ್ರಾಮದ ರಸ್ತೆಯ ಪಕ್ಕ ನೀರು ನುಗ್ಗಿದ್ದು ಇನ್ನು ಸ್ವಲ್ಪ ನೀರು ಹೆಚ್ಚಾದರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಅಧಿಕಾರಿಗಳ ಭೇಟಿ: ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ ಗ್ರಾಮಗಳಿಗೆ ಸಿಂದಗಿ ತಹಶೀಲ್ದಾರ್ ವಿಜಯ ಕಡಕಭಾವಿ, ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಗಿಮನಿ, ಚೇತನ ಭೊಸಗಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಜಿ. ಕಾಂಬಳೆ, ಸಹಾಯಕ ಕೃಷಿ ಅಧಿಕಾರಿ ಆರ್.ಎಸ್. ಬಂಡಗಾರ, ಮಹಾಂತ ಕರಶಿ, ಮೈಬೂಬ ಚೌಧರಿ, ಶಿವಾನಂದ ನಿಂಬಾಳ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಸ್ಥಿತಿ ಅವಲೋಕಿಸುತ್ತಿದ್ದಾರೆ.