Advertisement

ಕೃಷ್ಣೆಯಲ್ಲಿ ಮಿಂದೆದ್ದ ದೇವಾನು-ದೇವತೆಗಳು!

12:49 PM Apr 08, 2019 | Naveen |

ಆಲಮಟ್ಟಿ: ಹಿಂದು ಧಾರ್ಮಿಕ ಪದ್ಧತಿಯಂತೆ ಯುಗಾದಿ ಅಮವಾಸ್ಯೆಯು ವರ್ಷದ ಕೊನೆಯ ದಿನ. ಯುಗಾದಿ ಪಾಡ್ಯ ಹೊಸ ದಿನವಾಗಿರುವುದರಿಂದ ಕೃಷ್ಣಾನದಿ ತೀರದಲ್ಲಿ ಅಪಾರ ಸಂಖ್ಯೆಯಲ್ಲಿ ಪಲ್ಲಕ್ಕಿಗಳು, ಛತ್ರಿ ಚಾಮರಗಳನ್ನು ಶುಚಿಗೊಳಿಸುತ್ತಿರುವ ಕಾರ್ಯದಲ್ಲಿ ಭಕ್ತರ ಸಾಗರವೇ ನೆರೆದಿತ್ತು.

Advertisement

ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಮುಂಭಾಗದ ಕೃಷ್ಣಾ ನದಿಯ ಎರಡೂ ದಂಡೆಯ ಮೇಲೆ ದೇವರುಗಳ ಪಲ್ಲಕ್ಕಿಗಳು ಸೇರಿ ಮೂರ್ತಿ ಸ್ವತ್ಛತೆ, ಪಲ್ಲಕ್ಕಿ, ಚೌಕಿ, ಛತ್ರಿ ಚಾಮರಗಳ ಸಂಭ್ರಮ, ಕಳಶಗಳ ಮೆರವಣಿಗೆ ಡೊಳ್ಳು ಕುಣಿತ, ಹಲಗೆ ವಾದನ, ಕೊಂಬು ಕಹಳೆ ಊದುವುದು ಹೀಗೆ ಕೃಷ್ಣೆಯ ಹಿನ್ನೀರು ಹಾಗೂ ಮುನ್ನೀರು ಭಾಗದ ನದಿ ದಂಡೆಯ ಮೇಲೆ ಹಾಗೂ ಪಟ್ಟಣದ ಪ್ರಮುಖ ರಸ್ತೆಯ ತುಂಬ ಪಲ್ಲಕಿಗಳ ಮೆರವಣಿಗೆ ನಡೆಯಿತು.

ಗುರುವಾರ ಹಾಗೂ ಶುಕ್ರವಾರ ನದಿ ತೀರಕ್ಕೆ ಆಗಮಿಸಿದ್ದ ಭಕ್ತರು ತಾವು ತಗೆದುಕೊಂಡು ಬಂದಿರುವ ದೇವರುಗಳ ಪಲ್ಲಕ್ಕಿಗಳ ಮುಂದೆ ಪೂರ್ಣ ರಾತ್ರಿ ಡೊಳ್ಳಿನ ಪದ, ಹಲಗೆ ವಾದನ ನುಡಿಸುತ್ತಾರೆ. ಯುಗಾದಿ ಅಮವಾಸ್ಯೆಗಳಂದು ಚಂದ್ರಗಿರಿ ಚಂದ್ರಮ್ಮ ದೇವಸ್ಥಾನದಿಂದ ಆಲಮಟ್ಟಿ ಎಡದಂಡೆ ಕಾಲುವೆಯ ಮುಖ್ಯಸ್ಥಾವರದಾಚೆಗೂ ನದಿ ದಡದಲ್ಲಿ ಪಲ್ಲಕ್ಕಿಗಳು, ಛತ್ರಿ ಚಾಮರಗಳೊಂದಿಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಲಾರಿ, ಮಿನಿ ಬಸ್‌ ಹಾಗೂ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತರು ನದಿಯಲ್ಲಿ ದೇವರ ಮೂರ್ತಿಗಳನ್ನು ಮತ್ತು ಪಲ್ಲಕ್ಕಿಯನ್ನು ಶುಚಿಗೊಳಿಸಿ ಅವೆಲ್ಲವನ್ನೂ ನೀರಿನಲ್ಲಿ ಮಿಂದೆದ್ದು ತಮ್ಮ ವಾಹನಗಳನ್ನು ಶುಚಿಗೊಳಿಸುತ್ತಿರುವ ದೃಶ್ಯಗಳು ಆಲಮಟ್ಟಿ, ಯಲಗೂರ, ಸೀತಿಮನಿ, ಅರಳದಿನ್ನಿ, ಯ.ಬೂದಿಹಾಳ, ಮನಹಳ್ಳಿ, ಕೃಷ್ಣಾ ಸೇತುವೆಗಳ ಕೆಳಭಾಗ, ಪಾರ್ವತಿಕಟ್ಟೆ ಸೇತುವೆ, ಕೃಷ್ಣಾ ಸೇತುವೆಗಳ ಕೆಳಭಾಗ ಸೇರಿದಂತೆ ಕೃಷ್ಣಾ ನದಿ ತೀರದಲ್ಲಿ ಪಲ್ಲಕ್ಕಿಗಳ ಸಂಭ್ರಮ ಪ್ರತಿವರ್ಷವೂ ಹೆಚ್ಚಾಗುತ್ತಿದೆ.

ಗುರುವಾರದಿಂದ ಶುಕ್ರವಾರ ಸಂಜೆಯವರೆಗೆ ಮತ್ತು ಶನಿವಾರವೂ ಕೂಡ ನೂರಾರು ಪಲ್ಲಕ್ಕಿಗಳು ಆಗಮಿಸಿ ಕೃಷ್ಣೆಯ ಪವಿತ್ರ ಜಲದಿಂದ ಅವುಗಳನ್ನು ಪಾವನಗೊಳಿಸಿರುವುದಲ್ಲದೇ ಭಕ್ತರು ತಾವು ಮೊದಲು ನದಿಯಲ್ಲಿ ಮಿಂದೆದ್ದು ನಂತರ ಗಂಗಾಪೂಜೆ ಮಾಡಿ ಪಲ್ಲಕ್ಕಿಗಳನ್ನು ಶುಚಿಗೊಳಿಸುತ್ತಾರೆ.  ಇನ್ನು ಕೆಲ ದೇವರುಗಳನ್ನು ಯುಗಾದಿಯ ಹಿಂದಿನ ದಿನವೇ ಈ ರೀತಿ ಮಾಡಲಾಗುತ್ತದೆ.

ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಂದು ಭಕ್ತರು ಕೃಷ್ಣೆಯಲ್ಲಿ ಮಿಂದು ಚಂದ್ರಮ್ಮಾ ದೇವಿ, ಸಿದ್ದಲಿಂಗೇಶ್ವರ ತಪೋಮಂದಿರ, ಅನ್ನದಾನೇಶ್ವರ ಪುರವರ ಹಿರೇಮಠ ಹಾಗೂ
ಯಲಗೂರದ ಆಂಜನೇಯಸ್ವಾಮಿ ದರ್ಶನ ಪಡೆದು ಗ್ರಾಮಗಳಿಗೆ
ತೆರಳುತ್ತಾರೆ. ಆದ್ದರಿಂದ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ
ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದ ಹಿನ್ನೀರು
ಪ್ರದೇಶವಾದ ಚಂದ್ರಮ್ಮಾದೇವಿ ದೇವಸ್ಥಾನದ ಬಳಿ ಸ್ನಾನದ ಕಟ್ಟೆ
ನಿರ್ಮಿಸಿ ಯಾತ್ರಿಕರಿಗೆ ಹಾಗೂ ಭಕ್ತರು ಅನುಕೂಲ ಕಲ್ಪಿಸಬೇಕು.
ಎಸ್‌.ಸಿ. ಮಾದರ,
ಗ್ರಾಪಂ ಮಾಜಿ ಉಪಾಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next